ಬೆಂಗಳೂರಿನ ಅಕ್ರಮ ಪಿಜಿಗಳಿಗೆ ಹೈಕೋರ್ಟ್ ಬಿಸಿ
ಬೆಂಗಳೂರಿನ ಅಕ್ರಮ ಪಿಜಿಗಳ ವಿರುದ್ಧ ಹೈಕೋರ್ಟ್ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದು, ಪಿಜಿಗಳ ಸುರಕ್ಷತೆ, ಪರವಾನಗಿ, ಕಟ್ಟಡ ನಿಯಮ ಹಾಗೂ ನಿವಾಸಿಗಳ ಭದ್ರತೆಗೆ ಸಂಬಂಧಿಸಿದಂತೆ 81 ಅಂಶಗಳ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಬೆಂಗಳೂರಿನ ಅಕ್ರಮ ಪಿಜಿಗಳಿಗೆ ಹೈಕೋರ್ಟ್ ಬಿಸಿ


ಬೆಂಗಳೂರು, 04 ಅಕ್ಟೋಬರ್ (ಹಿ.ಸ.):

ಬೆಂಗಳೂರಿನಲ್ಲಿ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಪೇಯಿಂಗ್ ಗೆಸ್ಟ್ ವಸತಿ ಕೇಂದ್ರಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದೆ.

ಪಿಜಿಗಳ ಸುರಕ್ಷತೆ, ಪರವಾನಗಿ, ಕಟ್ಟಡ ನಿಯಮ, ಅಗ್ನಿ ಸುರಕ್ಷತೆ ಹಾಗೂ ನಿವಾಸಿಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಸಮಗ್ರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠವು ಪಿಜಿಗಳ ನಿಯಂತ್ರಣ, ಪರಿಶೀಲನೆ ಮತ್ತು ನಿಯಮ ಪಾಲನೆಗೆ ಸಂಬಂಧಿಸಿದಂತೆ 81 ಅಂಶಗಳ ಮಾರ್ಗಸೂಚಿಗಳನ್ನು ನೀಡಿದೆ.

ಪಿಜಿಗಳಿಗೆ ಕೇವಲ ಟ್ರೇಡ್ ಲೈಸೆನ್ಸ್ ಇರುವುದರಿಂದ ಅನಧಿಕೃತ ಕಟ್ಟಡ ನಿರ್ಮಾಣ ಅಥವಾ ನಿಯಮಬಾಹಿರ ಬಳಕೆ ಕಾನೂನುಬದ್ಧವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪೂರ್ವ ಬೆಂಗಳೂರಿನ 2,500 ಪಿಜಿಗಳು ಅಕ್ರಮಗ್ರೇಟರ್ ಬೆಂಗಳೂರು ಅಥಾರಿಟಿ (GBA) ನ್ಯಾಯಾಲಯಕ್ಕೆ ನೀಡಿದ ಮಾಹಿತಿಯಂತೆ, ಪೂರ್ವ ಬೆಂಗಳೂರಿನಲ್ಲಿ ಸುಮಾರು 5,000 ಪಿಜಿಗಳಿದ್ದು, ಅವುಗಳಲ್ಲಿ ಸುಮಾರು 2,500 ಪಿಜಿಗಳು ಸೂಕ್ತ ಪರವಾನಗಿ, ಕಟ್ಟಡ ನಕ್ಷೆ ಅನುಮೋದನೆ ಅಥವಾ ಅಗ್ನಿ ಸುರಕ್ಷತಾ ಅನುಮತಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ.

ವೈಟ್ಫೀಲ್ಡ್, ಮಹದೇವಪುರ, ಕೆ.ಆರ್.ಪುರಂ, ಇಂದಿರಾನಗರ ಮತ್ತು ಸಿ.ವಿ.ರಾಮನ್ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಪರಿಶೀಲನೆ ನಡೆದಿದೆ.

ನಿಯಮ ಉಲ್ಲಂಘಿಸಿದ ಪಿಜಿಗಳಿಗೆ ನೋಟಿಸ್ ನೀಡಲಾಗುತ್ತಿದ್ದು, ಸಂಬಂಧಪಟ್ಟವರಿಗೆ ವಿಚಾರಣೆಗೆ ಅವಕಾಶ ನೀಡಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಕಟ್ಟಡ ನಿಯಮ ಅಥವಾ ವಲಯ ನಿಯಮಗಳನ್ನು ಉಲ್ಲಂಘಿಸಿರುವ ನಿರ್ಮಾಣಗಳಿದ್ದರೆ ಮುಚ್ಚುವಿಕೆ ಅಥವಾ ಅಗತ್ಯವಿದ್ದಲ್ಲಿ ತೆರವು/ಧ್ವಂಸ ಕ್ರಮ ಕೈಗೊಳ್ಳಬಹುದು ಎಂದು ಜಿಬಿಎ ನ್ಯಾಯಾಲಯಕ್ಕೆ ತಿಳಿಸಿದೆ.

ಕಟ್ಟಡ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತುಪಿಜಿಗಳಲ್ಲಿ ಅನುಮೋದಿತ ಕಟ್ಟಡ ನಕ್ಷೆಯ ಪ್ರಕಾರವೇ ಬಳಕೆ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಅನಧಿಕೃತ ಮೆಜ್ಜನೈನ್, ಟೆರೇಸ್ ಕೊಠಡಿಗಳು, ಪಾರ್ಕಿಂಗ್ ಪ್ರದೇಶಗಳ ಪರಿವರ್ತನೆ, ಮೆಟ್ಟಿಲುಗಳಲ್ಲಿ ಅಡಚಣೆ ಹಾಗೂ ಅತಿಯಾದ ಜನದಟ್ಟಣೆ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿದೆ.

ಅಗ್ನಿ ನಿರ್ಗಮನ ಮಾರ್ಗಗಳನ್ನು ಮುಚ್ಚುವುದು, ಅತಿಯಾದ ಜನರನ್ನು ವಸತಿ ಮಾಡುವುದು ಸೇರಿದಂತೆ ಜೀವಕ್ಕೆ ತಕ್ಷಣದ ಅಪಾಯ ಉಂಟುಮಾಡುವ ಉಲ್ಲಂಘನೆಗಳಿಗೆ ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು. ಮೆಟ್ಟಿಲು, ಕಾರಿಡಾರ್ ಅಥವಾ ಮಲಗುವ ಸ್ಥಳಗಳಲ್ಲಿ LPG ಸಿಲಿಂಡರ್ಗಳನ್ನು ಸಂಗ್ರಹಿಸಬಾರದು ಎಂದು ನ್ಯಾಯಾಲಯ ಸೂಚಿಸಿದೆ.

ಮಹಿಳಾ ಪಿಜಿಗಳಿಗೆ ವಿಶೇಷ ಸುರಕ್ಷತೆಮಹಿಳೆಯರು ಹಾಗೂ ಇತರೆ ದುರ್ಬಲ ವರ್ಗದವರು ವಾಸಿಸುವ ಪಿಜಿಗಳಲ್ಲಿ ನಿಯಂತ್ರಿತ ಪ್ರವೇಶ, ಸಂದರ್ಶಕರ ಪರಿಶೀಲನೆ, ಕಾರ್ಯನಿರ್ವಹಿಸುವ ಬೀಗಗಳು, ತುರ್ತು ಸಂಪರ್ಕ ವ್ಯವಸ್ಥೆ ಮತ್ತು ಸಾಮಾನ್ಯ ಪ್ರದೇಶಗಳಲ್ಲಿ CCTV ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಆದರೆ ನಿವಾಸಿಗಳ ಖಾಸಗಿತನಕ್ಕೆ ಧಕ್ಕೆಯಾಗಬಾರದು ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಮಲಗುವ ಕೊಠಡಿ, ಸ್ನಾನಗೃಹ ಮತ್ತು ಶೌಚಾಲಯಗಳಲ್ಲಿ CCTV ಅಳವಡಿಸುವಂತಿಲ್ಲ. ಪಿಜಿ ಸಿಬ್ಬಂದಿಯ ಪೊಲೀಸ್ ಪರಿಶೀಲನೆ ನಡೆಸುವಂತೆಯೂ ಸೂಚಿಸಲಾಗಿದೆ.

ಮಾಲೀಕರು ಮತ್ತು ಅಧಿಕಾರಿಗಳಿಗೂ ಹೊಣೆಪಿಜಿ ಮಾಲೀಕರು, ನಿರ್ವಾಹಕರು ಮತ್ತು ದಿನನಿತ್ಯದ ನಿರ್ವಹಣೆಯ ಜವಾಬ್ದಾರಿ ಹೊಂದಿರುವವರು ನಿಯಮ ಪಾಲನೆಗೆ ಹೊಣೆಗಾರರಾಗಿರುತ್ತಾರೆ.

ನಿವಾಸಿಗಳ ಗುರುತಿನ ದಾಖಲೆ, ಶಾಶ್ವತ ವಿಳಾಸ, ತುರ್ತು ಸಂಪರ್ಕ ಹಾಗೂ ಆಗಮನ-ನಿರ್ಗಮನದ ದಾಖಲೆಗಳನ್ನು ನಿರ್ವಹಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಅಕ್ರಮ ಪಿಜಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಉಲ್ಲಂಘನೆಗಳ ಬಗ್ಗೆ ತಿಳಿದಿದ್ದರೂ ಕ್ರಮ ಕೈಗೊಳ್ಳದೆ ಇದ್ದರೆ, ಸಂಭವಿಸಬಹುದಾದ ಅನಾಹುತಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನೇ ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಬಹುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಪಿಜಿಗಳ ಸಮಗ್ರ ಮಾಹಿತಿಗಾಗಿ ಏಕೀಕೃತ ಡಿಜಿಟಲ್ ಡೇಟಾಬೇಸ್ ರೂಪಿಸುವ ಬಗ್ಗೆಯೂ ನ್ಯಾಯಾಲಯ ಸೂಚಿಸಿದ್ದು, ವಿವಿಧ ಇಲಾಖೆಗಳು ಸಮನ್ವಯದಿಂದ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ನಿರ್ದೇಶಿಸಿದೆ.

--------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande