

ಬಳ್ಳಾರಿ, 04 ಅಕ್ಟೋಬರ್ (ಹಿ.ಸ.)
ತುಂಗಭದ್ರ ಜಲಾಶಯದಲ್ಲಿ ಪ್ರಸ್ತುತ 68 ಟಿಎಂಸಿ ನೀರು ಲಭ್ಯವಿದ್ದು, ಬೆಳೆಗಳಿಗೆ ಅಗತ್ಯವಿರುವ ನೀರನ್ನು ಸಂಪೂರ್ಣವಾಗಿ ಒದಗಿಸಬೇಕು ಎಂದು ತುಂಗಭದ್ರ ರೈತ ಸಂಘ ಆಗ್ರಹಿಸಿದೆ.
ತುಂಗಭದ್ರ ರೈತ ಸಂಘದ ಅಧ್ಯಕ್ಷ ಡಾ. ಪುರುಷೋತ್ತಮಗೌಡ ದರೂರು ಅವರು ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಅವರಿಗೆ ಈ ಕುರಿತು ಮನವಿ ಸಲ್ಲಿಸಿ, ಬೆಳೆದು ನಿಂತಿರುವ ಬೆಳೆಗಳಿಗೆ ನೀರುಣಿಸಲು ಕೋರಿದ್ದಾರೆ.
ತುಂಗಭದ್ರ ಜಲಾಶಯದಲ್ಲಿ ಪ್ರಸ್ತುತ ಇರುವ 68 ಟಿಎಂಸಿ ನೀರಿನಲ್ಲಿ 10 ಟಿಎಂಸಿ ಕುಡಿಯುವ ನೀರಿಗಾಗಿ, 6 ಟಿಎಂಸಿ ನೀರು ಆವಿಯಾಗಲು ಹಾಗೂ 2 ಟಿಎಂಸಿ ನೀರು ಡೆಡ್ ಸ್ಟೋರೇಜ್ಗೆ ಮೀಸಲಿಟ್ಟರೂ, 50 ಟಿಎಂಸಿ ನೀರು ಕೃಷಿಗೆ ಲಭ್ಯವಾಗಲಿದೆ. ನವೆಂಬರ್ 30ರವರೆಗೆ ಪ್ರತಿದಿನ 9,500 ಕ್ಯುಸೆಕ್ಸ್ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಿದರೂ ಅಂದಾಜು 46 ಟಿಎಂಸಿ ಪ್ರಮಾಣದಲ್ಲಿ ನೀರು ಬಳಕೆಯಾಗಲಿದೆ. ಡಿಸೆಂಬರ್ನಲ್ಲಿ ಇನ್ನೂ 1 ಟಿಎಂಸಿ ನೀರನ್ನು ಎಚ್ಎಲ್ಸಿ ಕಾಲುವೆಗೆ ಬಿಡುಗಡೆ ಮಾಡಿದರೆ ಮೆಣಸಿನಕಾಯಿ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಸಂಪೂರ್ಣವಾಗಿ ಉಳಿಸಬಹುದು ಎಂದು ರೈತ ಸಂಘವು ಮನವಿಯಲ್ಲಿ ವಿವರಿಸಿದೆ.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಕಾಲುವೆಗಳಿಗೆ ನೀರು ಹಂಚಿಕೆ ಕುರಿತು ಸೆಪ್ಟೆಂಬರ್ 11ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನವನ್ನು ಉಲ್ಲೇಖಿಸಿರುವ ಸಂಘವು, ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಹಿತದೃಷ್ಟಿಯಿಂದ ಎಚ್ಎಲ್ಸಿ ಮತ್ತು ಎಲ್ಎಲ್ಸಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ನೀಡಬೇಕು ಎಂದು ಆಗ್ರಹಿಸಿದೆ.
ಬಳ್ಳಾರಿ ಗ್ರಾಮೀಣ, ಕಂಪ್ಲಿ, ಸಿರುಗುಪ್ಪ, ಸಂಡೂರು ಹಾಗೂ ಬಳ್ಳಾರಿ ನಗರ ಶಾಸಕರ ಜೊತೆಯಲ್ಲಿ ತುಂಗಭದ್ರ ಜಲಾಶಯಕ್ಕೆ ತಕ್ಷಣವೇ ಭೇಟಿ ನೀಡಿ ಅಥವಾ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುಂಗಭದ್ರ ಜಲಾಶಯದ ಮುಖ್ಯ ಅಭಿಯಂತರರ ಜೊತೆಯಲ್ಲಿ ಸಭೆಯನ್ನು ನಡೆಸಿ ಬೆಳೆಗಳ ಸಂರಕ್ಷಣೆಗಾಗಿ ನೀರು ಪೂರೈಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್