ಕನ್ನಡ ಪುಸ್ತಕ ಹಬ್ಬಕ್ಕೆ ಚಾಲನೆ: ಪುಸ್ತಕ ಓದುವ ಸಂಸ್ಕೃತಿ ಉಳಿಸುವುದು ಇಂದಿನ ಅಗತ್ಯ: ಡಾ. ಆರ್. ಗಣೇಶ್
ಬೆಂಗಳೂರು, 31 ಅಕ್ಟೋಬರ್ (ಹಿ.ಸ.): ಕೈಯಲ್ಲಿ ಮೊಬೈಲ್ ಇದ್ದರೆ ಮೂರು ಲೋಕಗಳ ವಿಷಯಗಳನ್ನೂ ತಿಳಿದುಕೊಳ್ಳಬಹುದು. ಆದರೆ ಕಣ್ಣಿಗೆ ಹಿತ ನೀಡುವ ಹಾಗೂ ಮನಸ್ಸಿಗೆ ಜ್ಞಾನ ಮತ್ತು ಸಂತೃಪ್ತಿ ನೀಡುವ ಶಕ್ತಿ ಪುಸ್ತಕಗಳಿಗಿದೆ. ಇಂದು ಪುಸ್ತಕ ಪ್ರಕಾಶನ ಕ್ಷೇತ್ರ ಅತಂತ್ರ ಸ್ಥಿತಿಯಲ್ಲಿದ್ದು, ಅದನ್ನು ಉಳಿಸಿ ಬೆಳೆ
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶತಾವಧಾನಿ ಡಾ. ಆರ್. ಗಣೇಶ್


ಬೆಂಗಳೂರು, 31 ಅಕ್ಟೋಬರ್ (ಹಿ.ಸ.):

ಕೈಯಲ್ಲಿ ಮೊಬೈಲ್ ಇದ್ದರೆ ಮೂರು ಲೋಕಗಳ ವಿಷಯಗಳನ್ನೂ ತಿಳಿದುಕೊಳ್ಳಬಹುದು. ಆದರೆ ಕಣ್ಣಿಗೆ ಹಿತ ನೀಡುವ ಹಾಗೂ ಮನಸ್ಸಿಗೆ ಜ್ಞಾನ ಮತ್ತು ಸಂತೃಪ್ತಿ ನೀಡುವ ಶಕ್ತಿ ಪುಸ್ತಕಗಳಿಗಿದೆ. ಇಂದು ಪುಸ್ತಕ ಪ್ರಕಾಶನ ಕ್ಷೇತ್ರ ಅತಂತ್ರ ಸ್ಥಿತಿಯಲ್ಲಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಕನ್ನಡವನ್ನು ನಾವು ಉಳಿಸಿಕೊಳ್ಳದಿದ್ದರೆ ಬೇರೆ ಯಾರೂ ಉಳಿಸಲು ಮುಂದೆ ಬರುವುದಿಲ್ಲ ಎಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶತಾವಧಾನಿ ಡಾ. ಆರ್. ಗಣೇಶ್ ಹೇಳಿದರು.

ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪದಲ್ಲಿ ಅಕ್ಟೋಬರ್ 31ರಿಂದ ಡಿಸೆಂಬರ್ 6ರವರೆಗೆ 37 ದಿನಗಳ ಕಾಲ ಆಯೋಜಿಸಿರುವ 6ನೇ ಕನ್ನಡ ಪುಸ್ತಕ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಕನ್ನಡದ ಮೂಲಕವೇ ಇತರ ಜಗತ್ತನ್ನು ನೋಡಿದ್ದೇವೆ. ಗದ್ಯ, ಪದ್ಯ ಮತ್ತು ಗೀತೆ ಈ ಮೂರೂ ಪ್ರಕಾರಗಳಲ್ಲಿ ಸಾಹಿತ್ಯ ರಚಿಸುವ ಸಾಮರ್ಥ್ಯ ಕನ್ನಡ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳಿಗೂ ಇದೆ. ಇಂತಹ ಭಾಷೆ ಮತ್ತು ಸಾಹಿತ್ಯ ಪರಂಪರೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಇಂದಿನ ಪೀಳಿಗೆಗೆ ಮಾಹಿತಿ ಸುಲಭವಾಗಿ ಲಭ್ಯವಾಗುತ್ತಿದೆ. ಆದರೆ ಆ ಮಾಹಿತಿಯ ಹಿಂದೆ ಇರುವ ಪರಿಶ್ರಮ ಮತ್ತು ಸಾಧನೆಯ ಅರಿವು ಮೂಡುತ್ತಿಲ್ಲ. ಕೇವಲ ಮಾಹಿತಿ ಪಡೆಯುವುದರಿಂದ ಜ್ಞಾನದ ಬೆಳವಣಿಗೆಯ ಹಾದಿ ತಿಳಿಯುವುದಿಲ್ಲ. ಸಾಹಿತ್ಯದ ಮೂಲಕ ಹರಿದುಬಂದ ಜೀವಶಕ್ತಿ ಹಾಗೂ ಸಾಹಿತ್ಯ ರಚನೆಯ ಹಿಂದಿನ ಪರಿಪೂರ್ಣತೆಯ ಅರಿವೂ ಆಗುವುದಿಲ್ಲ. ಇದರಿಂದ ಓದುಗರಲ್ಲಿ ಕೃತಿಗಳ ಹಿಂದಿರುವ ಪರಿಶ್ರಮದ ಬಗ್ಗೆ ಕೃತಜ್ಞತೆಯ ಭಾವನೆ ಮೂಡುತ್ತಿಲ್ಲ ಎಂದು ವಿಷಾದಿಸಿದರು.

ಹಲವು ವಿಷಯಗಳ ಸಾರವನ್ನು ಗ್ರಹಿಸುವುದರ ಜೊತೆಗೆ ಕೆಲವು ವಿಷಯಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ವ್ಯಕ್ತಿತ್ವದ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗುವ ಪುಸ್ತಕಗಳನ್ನು ಪೂರ್ಣವಾಗಿ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ರಾಮಾಯಣದ ಕೆಲವೇ ಸಾಲುಗಳನ್ನು ಓದುವುದರಿಂದ ಶ್ರೀರಾಮನ ಸಂಪೂರ್ಣ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆಯ್ದ ಭಾಗಗಳನ್ನಷ್ಟೇ ಓದುವ ಪ್ರವೃತ್ತಿ ಹಾಗೂ ಪೂರ್ಣ ಅರಿವಿನ ಕೊರತೆ ಇಂದಿನ ಸವಾಲಾಗಿದೆ ಎಂದು ಹೇಳಿದರು.

ಪ್ರಾದೇಶಿಕ ಭಾಷೆಗಳ ಪುಸ್ತಕಗಳ ಬಗ್ಗೆ ಸಮಾಜದಲ್ಲಿ ನಿರ್ಲಕ್ಷ್ಯ ಹೆಚ್ಚುತ್ತಿದೆ. ಇದರ ನಡುವೆ ತಂತ್ರಜ್ಞಾನದ ಆವಿಷ್ಕಾರಗಳು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಎಲ್ಲ ಪುಸ್ತಕಗಳನ್ನು ಅಂಕೀಯ ರೂಪಕ್ಕೆ ಪರಿವರ್ತಿಸಿ ಮುದ್ರಿತ ಪುಸ್ತಕಗಳನ್ನು ಕೈಬಿಡುವಂತೆ ವಿದೇಶಿ ತಂತ್ರಜ್ಞಾನ ಕಂಪನಿಗಳು ಪ್ರೋತ್ಸಾಹಿಸುತ್ತಿವೆ. ಮುಂದೊಂದು ದಿನ ಮುದ್ರಿತ ಪುಸ್ತಕಗಳೇ ಇಲ್ಲದಂತಾಗಿ, ಅಂಕೀಯ ರೂಪದಲ್ಲಿರುವ ಪುಸ್ತಕಗಳನ್ನು ಬಳಸಲು ಕೂಡ ವಿದೇಶಿ ತಂತ್ರಜ್ಞಾನ ಕಂಪನಿಗಳ ಅನುಮತಿಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಬಹುದು. ಇದರಿಂದ ನಮ್ಮ ಜ್ಞಾನ ಪರಂಪರೆ ನಮಗೇ ಸಿಗದಂತಾಗುವ ಅಪಾಯವಿದೆ. ಹೀಗಾಗಿ ಜ್ಞಾನಕ್ಕಾಗಿ ಪರಾವಲಂಬಿಗಳಾಗದೆ ನಮ್ಮ ಜ್ಞಾನ ಪರಂಪರೆ ಮತ್ತು ಅಧಿಕೃತ ಜ್ಞಾನ ಸಂಪತ್ತನ್ನು ಸಂರಕ್ಷಿಸಬೇಕು ಎಂದು ಕರೆ ನೀಡಿದರು.

ಸಭೆಗಳಿಗೆ ಜನರನ್ನು ಸೇರಿಸುವುದು ಮತ್ತು ಅವರಲ್ಲಿ ಪುಸ್ತಕ ಓದುವ ಆಸಕ್ತಿ ಬೆಳೆಸುವುದು ಹಿಮಾಲಯವನ್ನು ಕೈಯಲ್ಲಿ ಎತ್ತಿಕೊಂಡಷ್ಟು ಕಷ್ಟದ ಕೆಲಸ. ಇಂತಹ ಸವಾಲಿನ ನಡುವೆಯೂ ರಾಷ್ಟ್ರೋತ್ಥಾನ ಸಾಹಿತ್ಯ ಕಳೆದ ಹಲವು ವರ್ಷಗಳಿಂದ ಪುಸ್ತಕ ಪ್ರದರ್ಶನ, ಮಾರಾಟದ ಜೊತೆಗೆ ವಿವಿಧ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಕನ್ನಡ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಿ: ನ್ಯಾಯಮೂರ್ತಿ ಅರವಿಂದ ಕುಮಾರ್

ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು, ಕನ್ನಡ ಭಾಷೆಯ ಮೇಲಿನ ಅಭಿಮಾನ, ಭಾರತೀಯ ಸಾಹಿತ್ಯ ಮತ್ತು ವೇದ ಪರಂಪರೆಯ ಮಹತ್ವ ಹಾಗೂ ರಾಷ್ಟ್ರಪ್ರೇಮದ ಅಗತ್ಯವನ್ನು ಒತ್ತಿಹೇಳಿದರು.

ರಾಷ್ಟ್ರದ ಏಕತೆಗಾಗಿ ಪ್ರತಿಯೊಬ್ಬರೂ ಬದ್ಧತೆ ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ಸಮರ್ಪಕವಾಗಿ ನಿಭಾಯಿಸಬೇಕು. ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಯಾಗಿದೆ ಎಂದು ಹೇಳಿದರು.

ಜಗತ್ತನ್ನು ಅರಿಯುವುದರ ಜೊತೆಗೆ ಜಗತ್ತಿನ ಉತ್ತಮ ವಿಚಾರಗಳನ್ನು ಕನ್ನಡಕ್ಕೆ ತರಬೇಕು. ಕನ್ನಡ ನಾಡಿನಲ್ಲಿ ಹುಟ್ಟಿದ ಉತ್ತಮ ಚಿಂತನೆಗಳನ್ನು ಜಗತ್ತಿಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಕೃತಿಗಳ ರಚನೆಯಾಗಬೇಕು ಮತ್ತು ಅವು ಓದುಗರಿಗೆ ಸುಲಭವಾಗಿ ಲಭ್ಯವಾಗುವಂತಾಗಬೇಕು. ಸಾಹಿತ್ಯವು ಮಾನವೀಯ ಗುಣಗಳನ್ನು ಬೆಳೆಸಿ, ಬದುಕಿಗೆ ಅರಿವಿನ ಬೆಳಕು ನೀಡುವಂತಿರಬೇಕು ಎಂದು ಆಶಿಸಿದರು.

ಡಿವಿಜಿ ಅವರ ಆಶಯದ ಮುಂದುವರಿಕೆ: ವಿ. ನಾಗರಾಜ್

ದಿ ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್ ಮಾತನಾಡಿ, ಕನ್ನಡ ಪುಸ್ತಕ ಹಬ್ಬದ ಪರಿಕಲ್ಪನೆ ಡಿ.ವಿ. ಗುಂಡಪ್ಪ ಅವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ಆರಂಭವಾಯಿತು. ಡಿವಿಜಿ ಅವರ ಚಿಂತನೆಗಳು ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಾಹಿತ್ಯ, ಸಂಸ್ಕೃತಿ ಮತ್ತು ಮೌಲ್ಯಗಳ ಮಹತ್ವವನ್ನು ಜನರಿಗೆ ಪರಿಚಯಿಸುವ ಕಾರ್ಯ ಮಾಡಿದ್ದವು. ಅದೇ ಆಶಯ ಮತ್ತು ಉದ್ದೇಶದೊಂದಿಗೆ ರಾಷ್ಟ್ರೋತ್ಥಾನ ಸಂಸ್ಥೆಯೂ ಕಾರ್ಯನಿರ್ವಹಿಸುತ್ತಿದ್ದು, ಆರನೇ ಕನ್ನಡ ಪುಸ್ತಕ ಹಬ್ಬ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಕನ್ನಡ ಭಾಷೆ, ಸಾಹಿತ್ಯ ಮತ್ತು ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದೆ. ಓದುವ ಹವ್ಯಾಸ ವ್ಯಕ್ತಿಯ ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಚಿಂತನಾ ಶಕ್ತಿ ಮತ್ತು ವ್ಯಕ್ತಿತ್ವ ವಿಕಸನಕ್ಕೂ ನೆರವಾಗುತ್ತದೆ. 37 ದಿನಗಳ ಕಾಲ ನಡೆಯುವ ಪುಸ್ತಕ ಹಬ್ಬವು ಪುಸ್ತಕ ಪ್ರಿಯರು, ಸಾಹಿತ್ಯಾಸಕ್ತರು ಮತ್ತು ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ವಿವಿಧ ಆಯಾಮಗಳನ್ನು ಪರಿಚಯಿಸುವ ವೇದಿಕೆಯಾಗಲಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಭಾಷೆ ಸಂಸ್ಕೃತಿ, ಪರಂಪರೆಯ ಪ್ರತಿಬಿಂಬ: ಎಂ.ಪಿ. ಕುಮಾರ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಪಿ. ಕುಮಾರ್ ಮಾತನಾಡಿ, ಕನ್ನಡ ಪುಸ್ತಕ ಹಬ್ಬವು ಕನ್ನಡ ಭಾಷೆಯ ಮಹತ್ವ, ವೈಶಿಷ್ಟ್ಯ ಮತ್ತು ಶ್ರೀಮಂತ ಪರಂಪರೆಯನ್ನು ನೆನಪಿಸುವುದರ ಜೊತೆಗೆ ಭಾಷೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ವೇದಿಕೆಯಾಗಿದೆ ಎಂದರು.

ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಂದು ಭಾಷೆಯೂ ತನ್ನದೇ ಆದ ಭಾವನೆ ಮತ್ತು ಅಭಿವ್ಯಕ್ತಿಯ ವೈಶಿಷ್ಟ್ಯ ಹೊಂದಿದೆ. ಭಾಷಾಂತರ ಮಾಡುವ ಸಂದರ್ಭದಲ್ಲಿ ಮೂಲ ಭಾಷೆಯ ಭಾವನೆ, ಅರ್ಥ ಮತ್ತು ಆಶಯಗಳು ಬದಲಾಗುವ ಸಾಧ್ಯತೆಗಳಿರುವುದರಿಂದ ಭಾಷೆಯ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಭಾರತೀಯ ಶಿಕ್ಷಣ ಪರಂಪರೆಯ ಭಾಷಾ ಮೌಲ್ಯಗಳನ್ನು ಆಧುನಿಕ ಶಿಕ್ಷಣ ವ್ಯವಸ್ಥೆಯೊಂದಿಗೆ ಸಮನ್ವಯಗೊಳಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಮಾತೃಭಾಷಾ ಶಿಕ್ಷಣ, ಸಮಗ್ರ ಕಲಿಕೆ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಭವ್ಯ ಶೋಭಾಯಾತ್ರೆ

ಪುಸ್ತಕ ಹಬ್ಬದ ಉದ್ಘಾಟನೆಗೂ ಮುನ್ನ ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್‌ವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗೌರವ ಕಾರ್ಯದರ್ಶಿ ವಿ. ನಾಗರಾಜ್, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಹಾಗೂ ಲೇಖಕ ಡಾ. ರೋಹಿಣಾಕ್ಷ ಶಿರ್ಲಾಲು ಅವರು ನಾಡಿನ ಖ್ಯಾತ ಸಾಹಿತಿ ಹಾಗೂ ಗೋಖಲೆ ಸಾರ್ವಜನಿಕ ವಿಚಾರ ಕೇಂದ್ರದ ಸ್ಥಾಪಕ ಡಿ.ವಿ. ಗುಂಡಪ್ಪ ಅವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande