
ಬೆಂಗಳೂರು, 28 ಅಕ್ಟೋಬರ್ (ಹಿ.ಸ.):
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ, ಕಸ, ಒಳಚರಂಡಿ, ಗುಂಡಿಗಳು ಹಾಗೂ ಬೀದಿ ದೀಪಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನವೆಂಬರ್ 1ರಿಂದ ‘ವಾರ್ಡ್ ಕ್ಲೀನಿಂಗ್ ಡ್ರೈವ್’ ಆರಂಭಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ನವೆಂಬರ್ 30ರೊಳಗೆ ಸಾಧ್ಯವಾದಷ್ಟು ಸಮಸ್ಯೆಗಳನ್ನು ಪರಿಹರಿಸುವ ಗುರಿಯೊಂದಿಗೆ ನಗರದ ಎಲ್ಲ ವಾರ್ಡ್ಗಳಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಸಚಿವರು, “ಕಳೆದ 25 ದಿನಗಳಿಂದ ಚುನಾವಣೆ ಪ್ರಕ್ರಿಯೆ ಇದ್ದುದರಿಂದ ಕಾಮಗಾರಿಗಳಿಗೆ ವೇಗ ನೀಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಎಲ್ಲ ಮಹಾನಗರ ಪಾಲಿಕೆಗಳ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ.
ಮಳೆಯಿಂದಾಗಿ ರಸ್ತೆಗಳು ಹಾಳಾಗಿವೆ. ರಸ್ತೆ, ಕಸ, ಒಳಚರಂಡಿ, ಗುಂಡಿ ಹಾಗೂ ಬೀದಿ ದೀಪಗಳ ಸಮಸ್ಯೆಗಳನ್ನು ಸರಿಪಡಿಸಲು ಸೂಚನೆ ನೀಡಿದ್ದೇನೆ.
ಮಳೆಯಿಂದ ಫುಟ್ಪಾತ್ಗಳ ಮೇಲೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಕೆಲಸವೂ ನಡೆಯಬೇಕು” ಎಂದು ತಿಳಿಸಿದ್ದಾರೆ.
“ನವೆಂಬರ್ ತಿಂಗಳು ಪೂರ್ತಿ ವಿಶೇಷ ಅಭಿಯಾನ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂಬ ಸಲಹೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದಾರೆ.
ಅವರ ಸಲಹೆಯಂತೆ ಆಯುಕ್ತರೊಂದಿಗೆ ಸಭೆ ನಡೆಸಿ, ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮನ್ವಯದ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.
ಮೊದಲು ಸಮೀಕ್ಷೆ, ನಂತರ ಕಾರ್ಯಾಚರಣೆ
ನಗರದ ಪ್ರತಿಯೊಂದು ವಾರ್ಡ್ನಲ್ಲಿರುವ ಸಮಸ್ಯೆಗಳನ್ನು ಗುರುತಿಸಿ, ಮೂಲಸೌಕರ್ಯ ಸುಧಾರಣೆಗೆ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಮೊದಲ ಹಂತದಲ್ಲಿ ನಾಲ್ಕರಿಂದ ಐದು ದಿನಗಳ ಕಾಲ ಸಮೀಕ್ಷೆ ನಡೆಸಿ,
ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಬಳಿಕ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಈಗಾಗಲೇ ಬೆಂಗಳೂರಿನ ಸ್ವಚ್ಛತೆಗಾಗಿ ಕೈಗೊಂಡಿರುವ ಕ್ರಮಗಳ ಮುಂದುವರಿದ ಭಾಗವಾಗಿ ವಾರ್ಡ್ ಮಟ್ಟದಲ್ಲಿ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದ್ದೇವೆ.
ಪ್ರತಿ ವಾರ್ಡ್ನ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯಯೋಜನೆ ರೂಪಿಸಿ, ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಕಸದ ವಾಹನಗಳ ಅಕ್ರಮಕ್ಕೆ ಕಡಿವಾಣ
ನಗರದಲ್ಲಿ ಕಸ ನಿರ್ವಹಣೆಯನ್ನು ಸುಧಾರಿಸುವುದರ ಜೊತೆಗೆ, ಕಸದ ವಾಹನಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಜಿಬಿಎ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಕೆಲಸಕ್ಕೆ ಹಾಜರಾಗದ ಸಿಬ್ಬಂದಿ ನಕಲಿ ಹಾಜರಾತಿ ದಾಖಲಿಸುವುದು ಹಾಗೂ ವಾಹನಗಳು ನಿಗದಿತ ಮಾರ್ಗದಲ್ಲಿ ಸಂಚರಿಸದಿರುವುದನ್ನು ತಡೆಯಲು ಫೇಸ್ ರೆಕಗ್ನಿಷನ್ ಮತ್ತು ಜಿಪಿಎಸ್ ತಂತ್ರಜ್ಞಾನವನ್ನು ಕಡ್ಡಾಯಗೊಳಿಸಲಾಗುತ್ತಿದೆ.
“ಕಸದ ವಾಹನಗಳಲ್ಲಿ ಜಿಪಿಎಸ್ ಇಲ್ಲದಿದ್ದರೆ ಅವು ಕೆಲಸಕ್ಕೆ ಬಂದಿವೆಯೇ, ನಿಗದಿಪಡಿಸಿದ ಮಾರ್ಗದಲ್ಲೇ ಸಂಚರಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಹೀಗಾಗಿ ಪ್ರತಿಯೊಂದು ವಾಹನದಲ್ಲೂ ಜಿಪಿಎಸ್ ಕಡ್ಡಾಯಗೊಳಿಸಿದ್ದೇವೆ. ಹೊಸ ವಾಹನಗಳನ್ನು ಖರೀದಿಸುವಾಗ ಜಿಪಿಎಸ್ ಅಳವಡಿಸಿರಬೇಕು ಎಂಬ ಷರತ್ತನ್ನು ಟೆಂಡರ್ನಲ್ಲೇ ವಿಧಿಸಲಾಗಿದೆ” ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.
ಹೊಸ ವಾಹನಗಳ ಖರೀದಿ ಹಾಗೂ ಜಿಪಿಎಸ್ ಅಳವಡಿಕೆಗೆ ಗುತ್ತಿಗೆದಾರರು ಒಂದೂವರೆ ತಿಂಗಳ ಕಾಲಾವಕಾಶ ಕೇಳಿದ್ದಾರೆ. ಐದು ಪ್ಯಾಕೇಜ್ಗಳಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದ್ದು, ಉಳಿದ 10 ಪ್ಯಾಕೇಜ್ಗಳಿಗೆ ಸಚಿವ ಸಂಪುಟದ ಅನುಮೋದನೆ ದೊರೆತ ಬಳಿಕ ಕಾರ್ಯಾದೇಶ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ದಿನಕ್ಕೆ 9 ಸಾವಿರ ಟನ್ ಕಸ ಸಂಗ್ರಹಿಸುವ ಗುರಿ
ಪ್ರಸ್ತುತ ನಗರದಲ್ಲಿ ದಿನಕ್ಕೆ ಸುಮಾರು 5,600 ಟನ್ ಕಸ ಸಂಗ್ರಹಿಸಲಾಗುತ್ತಿದೆ. ಈ ಪ್ರಮಾಣವನ್ನು 9,000 ಟನ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಹೆಚ್ಚಿನ ಸಾಮರ್ಥ್ಯದ ಹೊಸ ವಾಹನಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಪ್ರಸ್ತುತ ಸುಮಾರು 5,200 ಕಸದ ವಾಹನಗಳಿವೆ ಎಂದು ಲೆಕ್ಕ ನೀಡಲಾಗಿದ್ದು, ಅವುಗಳ ನೈಜ ಕಾರ್ಯನಿರ್ವಹಣೆಯನ್ನು ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಜಿಪಿಎಸ್ ಮೂಲಕ ವಾಹನಗಳ ಸಂಚಾರದ ಮಾಹಿತಿ ಲಭ್ಯವಾಗುವುದರಿಂದ ಕಸ ಸಂಗ್ರಹಣೆಯಲ್ಲಿನ ಲೋಪಗಳನ್ನು ಗುರುತಿಸಲು ಹಾಗೂ ಸೇವೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಲಿದೆ ಎಂಬುದು ಇಲಾಖೆಯ ನಿರೀಕ್ಷೆಯಾಗಿದೆ.
ರಸ್ತೆ ಸುಧಾರಿಸಿದರೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ
ಬೆಂಗಳೂರಿನ ಸಂಚಾರ ದಟ್ಟಣೆ ಕುರಿತು ಪ್ರತಿಕ್ರಿಯಿಸಿದ ಕೃಷ್ಣಬೈರೇಗೌಡ, ರಸ್ತೆಗಳನ್ನು ಸುಸ್ಥಿತಿಗೆ ತರುವುದರಿಂದ ಸಂಚಾರ ಸಮಸ್ಯೆ ಕಡಿಮೆ ಮಾಡಲು ನೆರವಾಗಲಿದೆ ಎಂದರು.
“ಟ್ರಾಫಿಕ್ ಸಮಸ್ಯೆ ಬಹಳ ಗಂಭೀರವಾದದ್ದು. ಬೆಂಗಳೂರು ಮಾತ್ರವಲ್ಲ, ಎಲ್ಲ ದೊಡ್ಡ ನಗರಗಳಲ್ಲೂ ಸಂಚಾರ ದಟ್ಟಣೆ ಇದೆ. ಬೆಂಗಳೂರಿನಲ್ಲಿ ಸಮಸ್ಯೆ ಸ್ವಲ್ಪ ಹೆಚ್ಚಿರಬಹುದು.
ನಾನು ಕೆಲಸದ ನಿಮಿತ್ತ ದೆಹಲಿಗೆ ಹೋದಾಗ ಅಲ್ಲಿಯೂ ಸಂಚಾರ ದಟ್ಟಣೆ ಎದುರಾಗುತ್ತದೆ. ರಸ್ತೆಗಳನ್ನು ಸ್ವಲ್ಪ ಸುಧಾರಿಸಿದರೂ ಸಂಚಾರ ಸಮಸ್ಯೆ ಕಡಿಮೆ ಮಾಡಲು ಸಹಾಯವಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.
ನಗರದ ಐದು ಮಹಾನಗರ ಪಾಲಿಕೆಗಳ ಆಯುಕ್ತರೊಂದಿಗೆ ಜಿಬಿಎ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಗತಿ, ಆಡಳಿತಾತ್ಮಕ ಅಡಚಣೆಗಳು ಹಾಗೂ ನಾಗರಿಕರಿಗೆ ಉತ್ತಮ ಸೇವೆ ಒದಗಿಸುವ ಕುರಿತು ಚರ್ಚಿಸಲಾಯಿತು.
ನವೆಂಬರ್ ತಿಂಗಳ ವಿಶೇಷ ಅಭಿಯಾನದ ಮೂಲಕ ವಾರ್ಡ್ ಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ಕಸ ನಿರ್ವಹಣೆಯಲ್ಲಿ ಹೊಣೆಗಾರಿಕೆ ಹೆಚ್ಚಿಸುವುದು ಜಿಬಿಎಯ ಪ್ರಮುಖ ಗುರಿಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R