
ದಾವಣಗೆರೆ, 28 ಅಕ್ಟೋಬರ್ (ಹಿ.ಸ.):
ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಅವರ ಶ್ರಮವನ್ನು ಗೌರವಿಸುವುದು ಮತ್ತು ಅವರ ಕಲ್ಯಾಣಕ್ಕೆ ಆದ್ಯತೆ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.
ದಾವಣಗೆರೆ ನಗರದಲ್ಲಿ ಬುಧವಾರ ಬೆಳಗ್ಗೆ ಸಿಟಿ ರೌಂಡ್ಸ್ ನಡೆಸಿದ ಸಚಿವರು, ನಗರದ ಸಿ.ಜಿ. ಆಸ್ಪತ್ರೆ ರಸ್ತೆಯಲ್ಲಿರುವ ಇಂಡಿಯನ್ ಕಾಫಿ ಹೋಟೆಲ್ನಲ್ಲಿ ಪೌರಕಾರ್ಮಿಕರೊಂದಿಗೆ ಟೀ ಸೇವಿಸಿ, ಅವರ ಕುಶಲೋಪರಿ ವಿಚಾರಿಸಿದರು.
ಪ್ರತಿದಿನ ಮುಂಜಾನೆಯಿಂದಲೇ ನಗರದ ಸ್ವಚ್ಛತೆಗಾಗಿ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ.
ಅವರ ಸೇವೆ ಶ್ಲಾಘನೀಯವಾಗಿದ್ದು, ನಗರದ ಸ್ವಚ್ಛತೆ ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಕಲ್ಯಾಣಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ.
ಸಾರ್ವಜನಿಕರು ಪೌರಕಾರ್ಮಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದರ ಜೊತೆಗೆ, ನಗರದ ಸ್ವಚ್ಛತೆ ಕಾಪಾಡುವ ಕಾರ್ಯದಲ್ಲಿ ಅವರಿಗೆ ಸಹಕಾರ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.
ಸಚಿವರು ಪೌರಕಾರ್ಮಿಕರೊಂದಿಗೆ ಆತ್ಮೀಯವಾಗಿ ಬೆರೆತು ಮಾತುಕತೆ ನಡೆಸಿದ್ದು, ಅವರ ದೈನಂದಿನ ಕೆಲಸ ಹಾಗೂ ಕ್ಷೇಮದ ಬಗ್ಗೆ ವಿಚಾರಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R