
ಬೆಂಗಳೂರು, 28 ಅಕ್ಟೋಬರ್ (ಹಿ.ಸ.):
ಸಾರ್ವಜನಿಕರ ದೇಣಿಗೆ ಮತ್ತು ಸ್ಥಳೀಯ ನಿವಾಸಿಗಳು, ಸ್ವಯಂಸೇವಕರ ಶ್ರಮದಿಂದ ಸ್ವಚ್ಛಗೊಂಡ ಮಲ್ಲೇಶ್ವರಂನ ಆನೆ ಪಾರ್ಕ್ ಮುಂಭಾಗದಲ್ಲಿ ಬಿಜೆಪಿ ಶಾಸಕ ಸಿ.ಎನ್. ಅಶ್ವತ್ಥ ನಾರಾಯಣ ಅವರ ಭಾವಚಿತ್ರವಿರುವ ಬ್ಯಾನರ್ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.
ನಾಗರಿಕರು ಸ್ವಯಂಪ್ರೇರಣೆಯಿಂದ ಕೈಗೊಂಡ ಸ್ವಚ್ಛತಾ ಕಾರ್ಯಕ್ಕೆ ರಾಜಕೀಯ ನಾಯಕರು ಶ್ರೇಯಸ್ಸು ಪಡೆದುಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಲ್ಲೇಶ್ವರಂನಲ್ಲಿರುವ ಆನೆ ಪಾರ್ಕ್ ದುಸ್ಥಿತಿಯಲ್ಲಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು, ಉದ್ಯಾನವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಸಹಕಾರದೊಂದಿಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ, ಸ್ಥಳೀಯ ನಿವಾಸಿಗಳು ಹಾಗೂ ಸ್ವಯಂಸೇವಕರು ಒಟ್ಟಾಗಿ ಸ್ವಚ್ಛತಾ ಕಾರ್ಯ ನಡೆಸಿದ್ದರು.
ಆದರೆ, ಸ್ವಚ್ಛತಾ ಕಾರ್ಯದ ಬಳಿಕ ಮರುದಿನ ಉದ್ಯಾನಕ್ಕೆ ಭೇಟಿ ನೀಡಿದ ನಿವಾಸಿಗಳಿಗೆ ಪ್ರವೇಶದ್ವಾರದ ಬಳಿ ಶಾಸಕ ಸಿ.ಎನ್. ಅಶ್ವತ್ಥ ನಾರಾಯಣ ಅವರ ಭಾವಚಿತ್ರ ಹಾಗೂ ಅಭಿನಂದನಾ ಸಂದೇಶವಿರುವ ದೊಡ್ಡ ಬ್ಯಾನರ್ ಕಂಡುಬಂದಿದೆ. ಇದರಿಂದ ಸ್ವಚ್ಛತಾ ಕಾರ್ಯದಲ್ಲಿ ಹಣ ಹಾಗೂ ಶ್ರಮ ಹೂಡಿದ ಸ್ವಯಂಸೇವಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಈ ಕುರಿತು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರೇ ಹಣ ಸಂಗ್ರಹಿಸಿ, ಸ್ವಯಂಪ್ರೇರಣೆಯಿಂದ ಶ್ರಮವಹಿಸಿ ಉದ್ಯಾನವನ್ನು ಸ್ವಚ್ಛಗೊಳಿಸಿರುವಾಗ, ಶಾಸಕರ ಹೆಸರಿನಲ್ಲಿ ಬ್ಯಾನರ್ ಹಾಕಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಬ್ಯಾನರ್ನ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಪರಿಶ್ರಮಕ್ಕೆ ಸೂಕ್ತ ಮನ್ನಣೆ ನೀಡಬೇಕು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲವರು, ಕೆಲಸವನ್ನು ಜನರು ಮಾಡಿದರೂ ಅದರ ಶ್ರೇಯಸ್ಸು ಸ್ಥಳೀಯ ಶಾಸಕರಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು, ಇತರರ ಶ್ರಮಕ್ಕೆ ರಾಜಕೀಯ ನಾಯಕರು ಮನ್ನಣೆ ಪಡೆಯುವ ಪ್ರವೃತ್ತಿಯನ್ನು ಟೀಕಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R