ಕಾರಜೋಳ ಬಸವೇಶ್ವರ ಸಕ್ಕರೆ ಕಾರ್ಖಾನೆ ಬಂದ್ ಗೆ ರೈತರ ಆಗ್ರಹ
ವಿಜಯಪುರ, 28 ಅಕ್ಟೋಬರ್ (ಹಿ.ಸ.) ವಿಜಯಪುರ ಜಿಲ್ಲೆಯ ಕಾರಜೋಳ ಬಸವೇಶ್ವರ ಸಕ್ಕರೆ ಕಾರ್ಖಾನೆಯ ಸಕ್ಕರೆ ಗೋಡಾವನ್ನು ಬಂದ್ ಮಾಡಿ, ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವವರೆಗೆ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಆರಂಭಿಸಬಾರದು ಹಾಗೂ ಗೋಡಾವನಲ್ಲಿರುವ ಸಕ್ಕರೆಯನ್ನು ಮಾರಾಟ ಮಾಡಬಾರದು ಎಂದು ಒತ್ತಾಯಿ
ಕಬ್ಬು ಬೆಳೆಗಾರರ ಪ್ರತಿಭಟನೆ


ವಿಜಯಪುರ, 28 ಅಕ್ಟೋಬರ್ (ಹಿ.ಸ.)

ವಿಜಯಪುರ ಜಿಲ್ಲೆಯ ಕಾರಜೋಳ ಬಸವೇಶ್ವರ ಸಕ್ಕರೆ ಕಾರ್ಖಾನೆಯ ಸಕ್ಕರೆ ಗೋಡಾವನ್ನು ಬಂದ್ ಮಾಡಿ, ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವವರೆಗೆ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಆರಂಭಿಸಬಾರದು ಹಾಗೂ ಗೋಡಾವನಲ್ಲಿರುವ ಸಕ್ಕರೆಯನ್ನು ಮಾರಾಟ ಮಾಡಬಾರದು ಎಂದು ಒತ್ತಾಯಿಸಿ ರೈತ ಮುಖಂಡರು ಹಾಗೂ ನೂರಾರು ರೈತರು ಪ್ರತಿಭಟನೆ ನಡೆಸಿದರು.

ರೈತರ ವಿವಿಧ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ತಕ್ಷಣವೇ ಪರಿಹರಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಕಾರ್ಖಾನೆ ಆಡಳಿತ ಮತ್ತು ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುವವರೆಗೆ ಕಾರ್ಖಾನೆ ಕಾರ್ಯಾರಂಭಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಕಾರ್ಖಾನೆ ಚಟುವಟಿಕೆಗಳನ್ನು ಮುಂದುವರಿಸಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಸಂಗಮೇಶ ಸಾಗರ, ರೈತರ ಬೇಡಿಕೆಗಳನ್ನು ಸರ್ಕಾರ ಮತ್ತು ಸಂಬಂಧಿಸಿದ ಕಾರ್ಖಾನೆ ಆಡಳಿತ ಗಂಭೀರವಾಗಿ ಪರಿಗಣಿಸಬೇಕು. ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವವರೆಗೆ ಕಾರ್ಖಾನೆಯನ್ನು ಪ್ರಾರಂಭಿಸಬಾರದು. ಸಕ್ಕರೆ ಗೋಡಾವನಲ್ಲಿರುವ ಸಕ್ಕರೆಯನ್ನು ಸಹ ಮಾರಾಟ ಮಾಡಬಾರದು ಎಂದು ಆಗ್ರಹಿಸಿದರು.

ರೈತರ ಹೋರಾಟದ ಧ್ವನಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತಲುಪಬೇಕು ಎಂಬ ಉದ್ದೇಶದಿಂದ ಪ್ರತಿಭಟನೆಯ ವಿಡಿಯೋವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಮುಖ್ಯಮಂತ್ರಿ ಅವರ ಗಮನಕ್ಕೆ ತರುವಂತೆ ಕಳುಹಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ರೈತರ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ಸಂಘಟಿತವಾಗಿ ನಡೆಸಲಾಗುವುದು. ರೈತರಿಗೆ ನ್ಯಾಯ ದೊರೆಯುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರೈತ ಮುಖಂಡರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ, ರಾಮನಗೌಡ ಪಾಟೀಲ, ಸೋಮು ಬಿರಾದಾರ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು. ರೈತರ ಒಗ್ಗಟ್ಟಿನ ಘೋಷಣೆಗಳು ಹಾಗೂ ವಿವಿಧ ಬೇಡಿಕೆಗಳ ಕೂಗು ಪ್ರತಿಭಟನಾ ಸ್ಥಳದಲ್ಲಿ ಮೊಳಗಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande