ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ಗೆ ಭರ್ಜರಿ ಗೆಲುವು
23,098 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ವಿರುದ್ಧ ಜಯ
BJP Candidate KM Suresh Wins Karnataka South East Graduates Constituency MLC Election


ಬೆಂಗಳೂರು, 28 ಅಕ್ಟೋಬರ್ (ಹಿ.ಸ.):

ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಅವರನ್ನು 23,098 ಮತಗಳ ಅಂತರದಿಂದ ಸೋಲಿಸಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಅಕ್ಟೋಬರ್ 27ರಂದು ಆರಂಭವಾಗಿದ್ದ ಮತ ಎಣಿಕೆ ಪ್ರಕ್ರಿಯೆ ಅಕ್ಟೋಬರ್ 28ರ ಬೆಳಿಗ್ಗೆ ಪೂರ್ಣಗೊಂಡಿತು.

ಒಟ್ಟು 10 ಸುತ್ತುಗಳಲ್ಲಿ ನಡೆದ ಮತ ಎಣಿಕೆಯ ಅಂತ್ಯದಲ್ಲಿ ಕೆ.ಎಂ. ಸುರೇಶ್ ಅವರು 66,020 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಅವರು 42,922 ಮತಗಳನ್ನು ಪಡೆದು ಪರಾಭವಗೊಂಡರು. ಸರ್ವ ಜನತಾ ಪಾರ್ಟಿಯ ಅಭ್ಯರ್ಥಿ ಸಿ.ಜಿ. ಪಾಟೀಲ್ 162 ಮತಗಳನ್ನು ಪಡೆದಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ಕಪನಿಗೌಡ 156, ಚಿಕ್ಕರಾಜು ಎಸ್. 377, ವೈ. ಯಾದವ್ 377, ಲಕ್ಷ್ಮಯ್ಯ ಆರ್. 387, ಲಕ್ಷ್ಮಿಕಾಂತ ಎಸ್. ಯಾದವ್ 369, ಶಶಿ ಹುಲಿಕಟ್ಟಿ 449, ಸೈಯದ್ ಅಫಕ್ ಅಹ್ಮದ್ 113 ಹಾಗೂ ಅಡ್ವಕೇಟ್ ಬಾರಿದ್ 1,107 ಮತಗಳನ್ನು ಪಡೆದಿದ್ದಾರೆ.

ಮತ ಎಣಿಕೆ ಪ್ರಕ್ರಿಯೆಯಲ್ಲಿ ಒಟ್ಟು 1,12,062 ಮತಗಳು ಮಾನ್ಯವಾಗಿದ್ದು, 20,076 ಮತಗಳನ್ನು ಅಮಾನ್ಯವೆಂದು ತಿರಸ್ಕರಿಸಲಾಗಿದೆ.

ಅಕ್ಟೋಬರ್ 23ರಂದು ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 1,83,888 ಮತದಾರರ ಪೈಕಿ 1,35,321 ಮಂದಿ ಮತ ಚಲಾಯಿಸಿದ್ದರು.

ಈ ಮೂಲಕ ಶೇ.73.58ರಷ್ಟು ಮತದಾನ ದಾಖಲಾಗಿತ್ತು. ಮತ ಚಲಾಯಿಸಿದವರಲ್ಲಿ 78,070 ಪುರುಷರು ಹಾಗೂ 57,251 ಮಹಿಳಾ ಮತದಾರರು ಸೇರಿದ್ದರು.

ಮತ ಎಣಿಕೆ ಪೂರ್ಣಗೊಂಡ ಬಳಿಕ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಅವರಿಗೆ ಚುನಾವಣೆ ಅಧಿಕಾರಿಗಳು ಆಯ್ಕೆಯ ಪ್ರಮಾಣಪತ್ರವನ್ನು ವಿತರಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande