
ಬೆಂಗಳೂರು, 14 ಅಕ್ಟೋಬರ್ (ಹಿ.ಸ.):
ನಟ ಕಿಚ್ಚ ಸುದೀಪ್ ಅವರನ್ನು ಏಕವಚನದಲ್ಲಿ ಸಂಬೋಧಿಸಿರುವ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರ ಹೇಳಿಕೆಗೆ ಮಾಜಿ ಸಚಿವ ಎಸ್.ಜಿ. ರಾಜುಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಸುದೀಪ್ ಅವರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೋಡೆಕಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಗೌಡ, ಸಾರ್ವಜನಿಕವಾಗಿ ಮಾತನಾಡುವಾಗ ವಯಸ್ಸಿಗೆ ತಕ್ಕಂತೆ ಮಾತನಾಡಬೇಕು. ಸುದೀಪ್ ಅವರಂತಹ ಹಿರಿಯ ಕಲಾವಿದರನ್ನು ಏಕವಚನದಲ್ಲಿ ಸಂಬೋಧಿಸುವುದು ಸರಿಯಲ್ಲ ಎಂದು ಹೇಳಿದರು.
ಯಾವುದೇ ಪ್ರಭಾವಿ ವ್ಯಕ್ತಿಗಳ ಬೆಂಬಲವಿಲ್ಲದೆ, ಸ್ವಂತ ಪರಿಶ್ರಮದಿಂದ 33 ವರ್ಷಗಳಿಂದ ಚಿತ್ರರಂಗದಲ್ಲಿ ಬೆಳೆದು ನಿಂತಿರುವ ದೊಡ್ಡ ಕಲಾವಿದ ಸುದೀಪ್. ಮದಕರಿ ನಾಯಕ ಜಯಂತ್ಯುತ್ಸವಕ್ಕೆ ಅವರು ಬಂದಿದ್ದು ತಪ್ಪೇ ಎಂದು ಪ್ರಶ್ನಿಸಿದ ಅವರು, ಜನರು ಸುದೀಪ್ ಅವರ ಹೆಸರು ಹೇಳಿ ಘೋಷಣೆ ಕೂಗಿದರೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವುದೇಕೆ ಎಂದು ಕೇಳಿದರು.
“ಕಲಾವಿದನಿಗೆ ಯಾವುದೇ ಜಾತಿಯಿಲ್ಲ. ಸುದೀಪ್ ಕೇವಲ ನಟರಲ್ಲ, ಅವರು ಸಮಾಜದ ಆಸ್ತಿ” ಎಂದು ರಾಜುಗೌಡ ಹೇಳಿದರು.
ನಾಯಕ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಸುದೀಪ್ ಭಾಗವಹಿಸಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಒತ್ತಾಯಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಜುಗೌಡ, ಸುದೀಪ್ ಅವರ ಬಗ್ಗೆ ಮಾತನಾಡುವಾಗ ಗೌರವದಿಂದ ನಡೆದುಕೊಳ್ಳಬೇಕು. ಉಗ್ರಪ್ಪ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R