
ಬೆಂಗಳೂರು, 14 ಅಕ್ಟೋಬರ್ (ಹಿ.ಸ.):
ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಸಭೆ ಫಲಪ್ರದವಾದ ಹಿನ್ನೆಲೆಯಲ್ಲಿ ರಾಜ್ಯದ 108 ಆ್ಯಂಬುಲೆನ್ಸ್ ನೌಕರರ ಸಂಘವು ತನ್ನ ಮುಷ್ಕರವನ್ನು ಅಧಿಕೃತವಾಗಿ ವಾಪಸ್ ಪಡೆದಿದೆ.
ನೌಕರರ ಬೇಡಿಕೆಗಳನ್ನು ಆರೋಗ್ಯ ಸಚಿವರೊಂದಿಗೆ ಸಮಾಲೋಚಿಸಿ ಹಂತ ಹಂತವಾಗಿ ಈಡೇರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ಹಿಂಪಡೆಯಲು ಸಂಘ ನಿರ್ಧರಿಸಿದೆ.
ವಿಕಾಸಸೌಧದಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ಪಾಂಡೆ ಅವರ ನೇತೃತ್ವದಲ್ಲಿ ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಯಿತು. ನೌಕರರ ವಿವಿಧ ಬೇಡಿಕೆಗಳ ಕುರಿತು ಚರ್ಚೆ ನಡೆಸಿದ ಅಧಿಕಾರಿಗಳು, ಆರೋಗ್ಯ ಸಚಿವರೊಂದಿಗೆ ಸಮಾಲೋಚಿಸಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದರು.
ಸಭೆಯ ಬಳಿಕ ಮಾತನಾಡಿದ ಸುವರ್ಣ ಕರ್ನಾಟಕ ಆರೋಗ್ಯ ಕವಚ ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ, “ಈ ಹಿಂದೆ ಅಧಿಕಾರಿಗಳೊಂದಿಗೆ ಹಲವು ಸಭೆಗಳು ನಡೆದಿದ್ದವು. ಇದೀಗ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.
ಸಚಿವರು ಬೆಂಗಳೂರಿಗೆ ಮರಳಿದ ಬಳಿಕ ಅವರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕರಿಗೆ ತುರ್ತು ಆರೋಗ್ಯ ಸೇವೆ ಒದಗಿಸುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ವಾಪಸ್ ಪಡೆಯುತ್ತಿದ್ದೇವೆ” ಎಂದು ಹೇಳಿದರು.
ಜಿವಿಕೆ ಸಂಸ್ಥೆಯೊಂದಿಗಿನ ಒಪ್ಪಂದ ರದ್ದುಪಡಿಸಲು ಸರ್ಕಾರಕ್ಕೆ ಮನವಿ
“ಸರ್ಕಾರ ಬಯಸಿದರೆ ಜಿವಿಕೆ ಸಂಸ್ಥೆಯೊಂದಿಗಿನ ಒಪ್ಪಂದವನ್ನು ರದ್ದುಪಡಿಸಬಹುದು. ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವೇತನವಿಲ್ಲದೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ” ಎಂದು ಪರಮಶಿವ ತಿಳಿಸಿದರು. ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನೌಕರರ ಪ್ರಮುಖ ಬೇಡಿಕೆಗಳೇನು?
108 ಆ್ಯಂಬುಲೆನ್ಸ್ ನೌಕರರು ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡಬೇಕು, ಕರ್ತವ್ಯದ ವೇಳೆ ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಗಳಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಹಾಗೂ ಆ್ಯಂಬುಲೆನ್ಸ್ ಸೇವೆಯನ್ನು ಮೂರು ಪಾಳಿಗಳಲ್ಲಿ ಸಮರ್ಪಕವಾಗಿ ನಿರ್ವಹಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದರು.
ಇದಲ್ಲದೆ, ವಲಯವಾರು ನಿಗದಿಪಡಿಸಿರುವ ವೇತನ ವ್ಯವಸ್ಥೆಯನ್ನು ರದ್ದುಪಡಿಸಿ ಏಕರೂಪದ ವೇತನ ವ್ಯವಸ್ಥೆ ಜಾರಿಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘವು ಸರ್ಕಾರದ ಮುಂದಿಟ್ಟಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R