
ಬೆಂಗಳೂರು, 13 ಅಕ್ಟೋಬರ್ (ಹಿ.ಸ.):
ಬನ್ನೇರುಘಟ್ಟ ಮುಖ್ಯರಸ್ತೆಯ ಜಂಕ್ಷನ್ಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ–ತಾವರೆಕೆರೆ ನಡುವಿನ ಜಂಕ್ಷನ್ಗಳ ಅಭಿವೃದ್ಧಿ ಹಾಗೂ ಸಂಚಾರ ವ್ಯವಸ್ಥೆ ಸುಧಾರಿಸುವ ಉದ್ದೇಶದಿಂದ, ಕಾಳೇನ ಅಗ್ರಹಾರ ಮೆಟ್ರೊ ನಿಲ್ದಾಣದಿಂದ ಐಐಎಂಬಿ ಮೆಟ್ರೊ ನಿಲ್ದಾಣದವರೆಗಿನ ಸುಮಾರು 3.2 ಕಿ.ಮೀ. ಉದ್ದದ ರಸ್ತೆಯ ಫುಟ್ಪಾತ್ಗಳನ್ನು ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪಾದಚಾರಿಗಳ ಸುರಕ್ಷತೆ, ಸುಗಮ ಸಂಚಾರ ಹಾಗೂ ಫುಟ್ಪಾತ್ಗಳಲ್ಲಿನ ಅಡೆತಡೆಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಫುಟ್ಪಾತ್ಗಳ ಅಭಿವೃದ್ಧಿಗೆ ಆದ್ಯತೆ
ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಸುಸಜ್ಜಿತ ಫುಟ್ಪಾತ್ಗಳನ್ನು ನಿರ್ಮಿಸಬೇಕು. ವಿಶೇಷವಾಗಿ ಕಾಳೇನ ಅಗ್ರಹಾರ ಮೆಟ್ರೊ ನಿಲ್ದಾಣದ ಸಮೀಪ ಪಾದಚಾರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸೂಚಿಸಿದರು.
ಫುಟ್ಪಾತ್ಗಳು ಹಾಗೂ ಚರಂಡಿಗಳ ನಿರ್ವಹಣೆಗೆ ಅಡ್ಡಿಯಾಗಿರುವ ಆಪ್ಟಿಕಲ್ ಫೈಬರ್ ಕೇಬಲ್ಗಳ (ಒಎಫ್ಸಿ) ಚೇಂಬರ್ಗಳು ಮತ್ತು ಕೇಬಲ್ಗಳನ್ನು ಸ್ಥಳಾಂತರಿಸಲು ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಪಾದಚಾರಿ ಮಾರ್ಗಗಳಿಗೆ ಅಡ್ಡಿಯಾಗಿರುವ ಪೊಲೀಸ್ ಕ್ಯಾಬಿನ್ಗಳು ಹಾಗೂ ಬೆಸ್ಕಾಂನ ರಿಂಗ್ ಮೇನ್ ಯೂನಿಟ್ಗಳನ್ನು (ಆರ್ಎಂಯು) ಸೂಕ್ತ ಪರ್ಯಾಯ ಸ್ಥಳಗಳಿಗೆ ಸ್ಥಳಾಂತರಿಸುವ ಸಾಧ್ಯತೆ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.
ತೆರೆದ ಚರಂಡಿಗಳಿಗೆ ಸ್ಲ್ಯಾಬ್ ಅಳವಡಿಕೆ
ರಸ್ತೆಯ ಬದಿಯ ತೆರೆದ ಚರಂಡಿಗಳ ಮೇಲೆ ಸ್ಲ್ಯಾಬ್ಗಳು ಇಲ್ಲದಿರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ, ಸ್ಲ್ಯಾಬ್ಗಳು ಕಾಣೆಯಾಗಿರುವ ಸ್ಥಳಗಳಲ್ಲಿ ತಕ್ಷಣವೇ ಅವುಗಳನ್ನು ಅಳವಡಿಸಿ ಸಾರ್ವಜನಿಕರ ಸುರಕ್ಷತೆ ಖಚಿತಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೆ, ವಾಹನ ದಟ್ಟಣೆ ಮತ್ತು ಲಭ್ಯವಿರುವ ಸ್ಥಳಾವಕಾಶವನ್ನು ಪರಿಗಣಿಸಿ ರಸ್ತೆ ಮಧ್ಯಭಾಗದಲ್ಲಿ ಪಾದಚಾರಿ ದಾಟುವ ವ್ಯವಸ್ಥೆ, ಪಾದಚಾರಿ ಸುರಕ್ಷತಾ ದ್ವೀಪಗಳು ಹಾಗೂ ಸುಧಾರಿತ ರಸ್ತೆ ದಾಟುವ ಸೌಲಭ್ಯಗಳನ್ನು ಕಲ್ಪಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ತಿಳಿಸಿದರು.
ಇಲಾಖೆಗಳ ಸಮನ್ವಯಕ್ಕೆ ಸೂಚನೆ
ಪಾದಚಾರಿಗಳ ಸುರಕ್ಷತೆ, ಸುಗಮ ಹಾಗೂ ಅಡೆತಡೆಯಿಲ್ಲದ ಫುಟ್ಪಾತ್ಗಳು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಹೇಶ್ವರ ರಾವ್ ಹೇಳಿದರು.
ಪರಿಶೀಲನೆ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ನಗರ ನಿಗಮದ ಆಯುಕ್ತ ಕೆ.ಎನ್. ರಮೇಶ್, ಮುಖ್ಯ ಎಂಜಿನಿಯರ್ಗಳಾದ ಬಸವರಾಜ ಕಬಾಡೆ ಮತ್ತು ಮಾಲತಿ ಸೇರಿದಂತೆ ಮೆಟ್ರೊ, ಬಿಎಂಟಿಸಿ, ಸಂಚಾರ ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R