ಆರಂಭಿಕ ಚಿಕಿತ್ಸೆ ಹಾಗೂ ಕುಟುಂಬದ ಬೆಂಬಲದಿಂದ ಮಾನಸಿಕ ಕಾಯಿಲೆ ಗುಣಮುಖ ಸಾಧ್ಯ
ಬಳ್ಳಾರಿ, 13 ಅಕ್ಟೋಬರ್ (ಹಿ.ಸ.) ವ್ಯಕ್ತಿಯಲ್ಲಿ ಪದೇ ಪದೇ ಎದುರಾಗುವ ಅತಿಯಾದ ಮಾನಸಿಕ ಒತ್ತಡ ಹಾಗೂ ಮಿತಿಮೀರಿದ ಆಲೋಚನೆಗಳಿಂದ ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ನ್ಯಾಯಾಧೀಶರು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ವಿಮರ್ಶಾ ಮಂಡಳಿಯ ಅಧ್ಯಕ್ಷರಾದ ಮೋಹನ್ ಹೆಚ್.ಎ ಅವರು ಅಭಿಪ್ರಾಯ
ಆರಂಭಿಕ ಚಿಕಿತ್ಸೆ ಹಾಗೂ ಕುಟುಂಬದ ಬೆಂಬಲದಿಂದ ಮಾನಸಿಕ ಕಾಯಿಲೆ ಗುಣಮುಖ ಸಾಧ್ಯ


ಆರಂಭಿಕ ಚಿಕಿತ್ಸೆ ಹಾಗೂ ಕುಟುಂಬದ ಬೆಂಬಲದಿಂದ ಮಾನಸಿಕ ಕಾಯಿಲೆ ಗುಣಮುಖ ಸಾಧ್ಯ


ಆರಂಭಿಕ ಚಿಕಿತ್ಸೆ ಹಾಗೂ ಕುಟುಂಬದ ಬೆಂಬಲದಿಂದ ಮಾನಸಿಕ ಕಾಯಿಲೆ ಗುಣಮುಖ ಸಾಧ್ಯ


ಬಳ್ಳಾರಿ, 13 ಅಕ್ಟೋಬರ್ (ಹಿ.ಸ.)

ವ್ಯಕ್ತಿಯಲ್ಲಿ ಪದೇ ಪದೇ ಎದುರಾಗುವ ಅತಿಯಾದ ಮಾನಸಿಕ ಒತ್ತಡ ಹಾಗೂ ಮಿತಿಮೀರಿದ ಆಲೋಚನೆಗಳಿಂದ ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ನ್ಯಾಯಾಧೀಶರು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ವಿಮರ್ಶಾ ಮಂಡಳಿಯ ಅಧ್ಯಕ್ಷರಾದ ಮೋಹನ್ ಹೆಚ್.ಎ ಅವರು

ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಐಟಿಎಂ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2026’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರಂಭಿಕ ಹಂತದಲ್ಲಿಯೇ ರೋಗಿಯ ಮನಃಸ್ಥಿತಿಯನ್ನು ಅರ್ಥೈಸಿಕೊಂಡು, ಕುಟುಂಬದ ಸದಸ್ಯರ ಸಹಕಾರ ಮತ್ತು ಪ್ರೀತಿಯೊಂದಿಗೆ ಸೂಕ್ತ ಚಿಕಿತ್ಸೆ ಕೊಡಿಸಿದರೆ ಕಾಯಿಲೆಯನ್ನು ಬೇಗನೆ ಗುಣಪಡಿಸಬಹುದು ಎಂದರು.

ಮಾನಸಿಕ ರೋಗಿಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಅಪಾಯಕಾರಿ ಎಂಬ ತಪ್ಪು ಕಲ್ಪನೆ ಇತ್ತು. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿ ಆದ ಅಭೂತಪೂರ್ವ ಸಂಶೋಧನೆಗಳು ಮತ್ತು ಸುಧಾರಿತ ಚಿಕಿತ್ಸಾ ಪದ್ಧತಿಗಳಿಂದಾಗಿ ರೋಗಿಗಳಿಗೆ ಮನೆಯಲ್ಲಿಯೇ ಆರೈಕೆ ಹಾಗೂ ಚಿಕಿತ್ಸೆ ನೀಡಲು ಸಾಧ್ಯವಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಅವರು, ವಿದ್ಯಾರ್ಥಿಗಳು ಅನಗತ್ಯ ಒತ್ತಡ ಹಾಗೂ ಖಿನ್ನತೆಗೆ ಒಳಗಾಗಬಾರದು. ಯಾವುದೇ ಮಾನಸಿಕ ಸಮಸ್ಯೆ ಅಥವಾ ಸಂಕಷ್ಟಗಳಿದ್ದಾಗ ಮುಕ್ತವಾಗಿ ಪಾಲಕರೊಂದಿಗೆ ಮನದಾಳದ ನೋವನ್ನು ಹಂಚಿಕೊಂಡು ಮಾನಸಿಕವಾಗಿ ಸದೃಢರಾಗಬೇಕು ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ವೀರೇಂದ್ರ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾನ್ಯವಾಗಿ 15 ರಿಂದ 25 ವರ್ಷದ ಯುವಜನತೆಯಲ್ಲಿ ಗ್ರಾಮೀಣ-ನಗರ ಅಥವಾ ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕಾಗಿ ಉಚಿತ ಆಪ್ತ ಸಮಾಲೋಚನೆ ಮತ್ತು ಔಷಧೋಪಚಾರಗಳು ಲಭ್ಯವಿವೆ. ಸಾರ್ವಜನಿಕರು ಯಾವುದೇ ಸಂದರ್ಭದಲ್ಲೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಟೆಲಿ-ಮನಸ್ ಉಚಿತ ಸಹಾಯವಾಣಿ 14416 ಸಂಖ್ಯೆಗೆ ಕರೆ ಮಾಡಿ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಬಹುದು ಎಂದು ತಿಳಿಸಿದರು.

ಮನೋರೋಗ ತಜ್ಞ ಡಾ. ನಂದಕಿಶೋರ್ ಎನ್.ಬಿ ಅವರು, ಮಾನಸಿಕ ಸಮಸ್ಯೆಯು ವ್ಯಕ್ತಿಯ ಆಲೋಚನೆ, ಭಾವನೆ ಹಾಗೂ ಗ್ರಹಿಕೆಯನ್ನು ಬಾಧಿಸುತ್ತದೆ. ಕಾರಣವಿಲ್ಲದೆ ಅತಿಯಾದ ಕೋಪ, ದುಃಖ, ಅತಿಯಾದ ನಗು ಅಥವಾ ಅಳು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಲಕ್ಷಣಗಳು ಕಂಡ ಕೆಲವೇ ವಾರಗಳಲ್ಲಿ ಮಾತ್ರೆ ಅಥವಾ ಚುಚ್ಚುಮದ್ದಿನ ಚಿಕಿತ್ಸೆ ಆರಂಭಿಸಿದರೆ ಕಾಯಿಲೆಯನ್ನು ಶೀಘ್ರವೇ ನಿಯಂತ್ರಿಸಬಹುದು. ಪ್ರಸ್ತುತ ‘ಮನೋಚೈತನ್ಯ' ಕಾರ್ಯಕ್ರಮದಡಿ ಪ್ರತಿ ಮಂಗಳವಾರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಉಚಿತ ತಪಾಸಣೆ ಮತ್ತು ಆಪ್ತ ಸಮಾಲೋಚನೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮಾನಸಿಕ ಆರೋಗ್ಯ ರಕ್ಷಣೆಯ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿಶ್ವ ದೃಷ್ಟಿ ದಿನದ ಅಂಗವಾಗಿ ಡಾ. ಅಪರ್ಣಾ ಅವರು ಕಣ್ಣಿನ ಆರೈಕೆ ಹಾಗೂ ನೇತ್ರದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.

ಬಿ.ಐ.ಟಿ.ಎಂ ಕಾಲೇಜಿನ ಅಧ್ಯಕ್ಷ ಡಾ. ಯಶವಂತ್ ಭೂಪಾಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಲಕಾನಂದ ಡಿ. ಮಳಗಿ, ಬಿ.ಐ.ಟಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಯಡವಳ್ಳಿ ಬಸವರಾಜ್ ಭಾಗವಹಿಸಿದ್ದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಎಸ್. ಕರ್ಜಿಗಿ ಕಾರ್ಯಕ್ರಮ ನಿರೂಪಿಸಿದರು.

ಶಾಂತಕುಮಾರ್ ಹೆಚ್., ಶರ್ಮಾಸ್ ವಲಿ, ರಂಜಿತಾ ಜಿ., ಸಾಹೇರಾ ಬಾನು, ನಿರಂಜನ, ವೀರಭದ್ರಪ್ಪ, ರಮೇಶ್ ಬಾಬು ಸೇರಿದಂತೆ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande