
ಬೆಂಗಳೂರು, 21 ಜನವರಿ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಲಿಂಗೈಕ್ಯ ಪದ್ಮಭೂಷಣ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 7ನೇ ಪುಣ್ಯಸ್ಮರಣೆಯ ಅಂಗವಾಗಿ ಮಹಾಸಭಾ ಅಧ್ಯಕ್ಷರೂ ಆಗಿರುವ ಸಚಿವರಾದ ಈಶ್ವರ ಖಂಡ್ರೆ ಅವರು ಪುಷ್ಪನಮನ ಸಲ್ಲಿಸಿದರು.
ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾಗಿದ್ದ ಡಾ. ಶಿವಕುಮಾರ ಮಹಾಸ್ವಾಮೀಜಿ ಅವರು ಆಶ್ರಯ–ಅನ್ನ–ಅಕ್ಷರ ಎಂಬ ತ್ರಿವಿಧ ದಾಸೋಹದ ಮೂಲಕ ಜಾತಿ, ಧರ್ಮ, ಜನಾಂಗದ ಯಾವುದೇ ಭೇದವಿಲ್ಲದೆ ಬಡವರ ಪಾಲಿಗೆ ಕಾಮಧೇನು–ಕಲ್ಪವೃಕ್ಷರಾಗಿದ್ದರು ಎಂದು ಈಶ್ವರ ಖಂಡ್ರೆ ಸ್ಮರಿಸಿದರು.
ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಮಹಾಸ್ವಾಮೀಜಿ ಅವರು ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಗುರುವಾಗಿದ್ದರು. ಹಾನಗಲ್ ಕುಮಾರೇಶ್ವರರು ಸ್ಥಾಪಿಸಿದ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದು,
“ವೀರಶೈವ ಬೇರೆ ಅಲ್ಲ, ಲಿಂಗಾಯತ ಬೇರೆ ಅಲ್ಲ; ನಾವೆಲ್ಲರೂ ಒಂದೇ – ಪರಶಿವನೇ ನಮ್ಮೆಲ್ಲರ ತಂದೆ” ಎಂಬ ಏಕತೆಯ ಸಂದೇಶವನ್ನು ಸಮಾಜಕ್ಕೆ ಸಾರಿದ್ದರು ಎಂದು ಹೇಳಿದರು.
ಶತಾಯುಷಿಗಳಾಗಿದ್ದ ಡಾ. ಶಿವಕುಮಾರ ಸ್ವಾಮೀಜಿ ಅವರು ಧಾರ್ಮಿಕ ಕೇಂದ್ರವಾಗಿದ್ದ ಸಿದ್ದಗಂಗಾ ಮಠವನ್ನು ಸರಸ್ವತಿಯ ನೆಲೆವೀಡಾಗಿ ರೂಪಿಸಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಲೌಕಿಕ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ನೀಡುವ ಮೂಲಕ ನವ ಕರ್ನಾಟಕ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಶಿವರಾತ್ರಿ ಜಾತ್ರೆಗಳ ಸಂದರ್ಭದಲ್ಲಿ ರೈತರು ಹಾಗೂ ಗ್ರಾಮೀಣ ಜನರಿಗೆ ವೈಜ್ಞಾನಿಕ ಆವಿಷ್ಕಾರಗಳು, ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸಿ ಅವರ ಬದುಕು ಸುಧಾರಣೆಗೆ ಕಾರಣರಾದರು ಎಂದು ಹೇಳಿದರು.
ಪುಣ್ಯಪುರುಷರ ಜಯಂತಿ ಮತ್ತು ಪುಣ್ಯಸ್ಮರಣೆಗಳು ಅವರ ಆದರ್ಶ ಹಾಗೂ ಬೋಧನೆಗಳನ್ನು ಸ್ಮರಿಸಿ ಜೀವನದಲ್ಲಿ ಅನುಸರಿಸಲು ಪ್ರೇರಣೆಯಾಗುತ್ತವೆ; ಅವು ನಮ್ಮ ಬದುಕಿಗೆ ದಾರಿದೀಪವಾಗುತ್ತವೆ ಎಂದು ಖಂಡ್ರೆ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಾಸಕ ಬಿ.ಆರ್. ಪಾಟೀಲ್, ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ರೇಣುಕಪ್ರಸನ್ನ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa