

ಬಳ್ಳಾರಿ, 21 ಜನವರಿ (ಹಿ.ಸ.) :
ಆ್ಯಂಕರ್ : ಕೋಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೆಲ್ದರ್ಜೆಗೇರಿಸಿ, ಪ್ರೌಢ ಶಾಲೆಯನ್ನು ದ್ವಿತೀಯ ಪಿಯುಸಿ ಕಾಲೇಜಾಗಿ ಹಾಗೂ ಕುಡಿಯುವ ನೀರಿನ ಕೆರೆಯನ್ನು ನಿರ್ಮಾಣ ಮಾಡಲು ಆಗ್ರಹಿಸಿ ಎಸ್‍ಯುಸಿಐನ ಕುರುಗೋಡು ಸಮಿತಿಯು ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಿದೆ.
ಕುರುಗೋಡು ತಾಲ್ಲೂಕಿನ ಕೋಳೂರು ಗ್ರಾಮದ ಮುಂಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಈ ಆರೋಗ್ಯ ಕೇಂದ್ರದಿಂದ ಕೋಳೂರು ಗ್ರಾಮ ಸೇರಿ ಸುತ್ತಲಿನ ಗ್ರಾಮಗಳು ಮತ್ತು ಮುಖ್ಯ ರಸ್ತೆಯ ಸಂಚಾರಿಗಳು ಆರೋಗ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಈ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲ, ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳೂ ಇಲ್ಲ. ಔಷಧಿಗಳೂ ಇಲ್ಲಿ ಸಿಗುವುದಿಲ್ಲ ಎಂದು ಸಮಿತಿಯು ಅಸಮಾಧಾನ ವ್ಯಕ್ತಪಡಿಸಿದೆ.
ಗ್ರಾಮದಲ್ಲಿ ಇರುವ ಪ್ರೌಢಶಾಲೆಯನ್ನು ಪಿಯುಸಿ ಕಾಲೇಜನ್ನಾಗಿ ಮೇಲ್ದರ್ಜೆಗೇರಿಸಿ ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡಬೇಕು. ಗ್ರಾಮಕ್ಕೆ ವರ್ಷವಿಡೀ ಕುಡಿಯುವ ನೀರನ್ನು ಪೂರೈಸಲು ಕೆರೆಯನ್ನು ನಿರ್ಮಾಣ ಮಾಡಬೇಕು ಎಂದು ಸಮಿತಿಯು ಕೋರಿದೆ.
ಕುರುಗೋಡು ಸ್ಥಳೀಯ ಸಮಿತಿಯ ಕಾರ್ಯದರ್ಶಿಗಳಾದ ಗೋವಿಂದ್, ಮುಖಂಡರಾದ ಕೋಳೂರು ಪಂಪಾಪತಿ, ಗುರಳ್ಳಿ ರಾಜ, ಲಿಂಗಪ್ಪ ಸೇರಿ ಹಲವರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್