




ಕೊಪ್ಪಳ, 21 ಜನವರಿ (ಹಿ.ಸ.) :
ಆ್ಯಂಕರ್ : 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಅಂಬಿಗರ ಚೌಡಯ್ಯ ಆದಿಯಾಗಿ ಅಂದಿನ ಶರಣರು ಸಾಮಾಜಿಕ ಮೌಡ್ಯಗಳ ನಿರ್ಮೂಲನೆ ಮಾಡುವ ಮೂಲಕ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ್ದರು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಬುಧವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅಂಬಿಗರ ಚೌಡಯ್ಯನವರು ತಮ್ಮ ಕಾಯಕದ ಮೂಲಕ ನಿಜ ಶರಣರಾಗಿದ್ದರು. ಅವರು ತಮ್ಮ ವಚನಗಳ ಮೂಲಕ ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದರು. ಅವರ ಜಯಂತಿ ಆಚರಣೆ ಮಾಡಿದರೆ ಸಾಲದು ಅವರ ತತ್ವ ಮತ್ತು ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಅವರ ಜೀವನ ಚರಿತ್ರೆ ಯುವ ಪೀಳಿಗೆಗೆ ತಿಳಿಯಬೇಕೆಂಬ ಉದ್ದೇಶದಿಂದಲೇ ನಮ್ಮ ಸರಕಾರ ಅಂಬಿಗರ ಚೌಡಯ್ಯ ಜಯಂತಿಯನ್ನು ಸರಕಾರದ ವತಿಯಿಂದ ಆಚರಣೆ ಮಾಡುತ್ತಿದೆ ಎಂದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶದಿಂದ ಸಿದ್ರಾಮಯ್ಯ ಸಾಹೇಬರು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು. ಇದರಿಂದ ರಾಜ್ಯದ ಲಕ್ಷಾö್ಯಂತರ ಬಡ ಜನರಿಗೆ ಅನುಕೂಲವಾಗಿದೆ. ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಸಂವಿಧಾನ ಕೊಡದಿದ್ದರೆ ಇಂದು ನಾನು ಶಾಸಕನಾಗಿರುತ್ತಿರಲಿಲ್ಲ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕೆಟಗರಿಗಳು ಬಂದ ನಂತರ ನಮಗೆ ಸಮಾನ ಅವಕಾಶಗಳು ಸಿಕ್ಕವು. ಸಮಾಜದ ಅಭಿವೃದ್ಧಿಯ ವಿಷಯ ಬಂದಾಗ ನಾವೆಲ್ಲರೂ ಒಂದಾಗಬೇಕು. ನಾವು ಇದೇ ಜಾತಿಯಲ್ಲಿ ಹುಟ್ಟುತ್ತೆವೆ ಎಂದು ಯಾರು ಅರ್ಜಿ ಹಾಕಿ ಹುಟ್ಟಿಲ್ಲ. ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಹುಟ್ಟು ಹಾಕಿದ್ದಾರೆ. ನಾವು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಮೊದಲು ಶಿಕ್ಷಣ ಪಡೆಯಬೇಕು. ಅಂಬಿಗರ ಚೌಡಯ್ಯ ಸಮುದಾಯ ಭವನಕ್ಕೆ 2 ಕೋಟಿ ಕೊಡಬೇಕೆನ್ನುವ ಸಮಾಜದ ಮುಖಂಡರ ಬೇಡಿಕೆ ಇದ್ದು, ಈಗ 50 ಲಕ್ಷ ಕೊಡುವ ಕೆಲಸ ಮಾಡುತ್ತಿದ್ದೆನೆ. ಉಳಿದ ಹಣವನ್ನು ನೀಡಲಾಗುವುದು. ತಮಗೆಲ್ಲರಿಗೂ ಅಂಬಿಗರ ಚೌಡಯ್ಯ ಜಯಂತಿ ಶುಭಾಶಯಗಳು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ಪ್ರಮುಖ ವಚನಕಾರರಾಗಿದ್ದ ಅಂಬಿಗರ ಚೌಡಯ್ಯನವರು ಕಾಯಕ, ವಚನ ಮತ್ತು ದಾಸೋಹವನ್ನು ತಮ್ಮ ಜೀವನದಲ್ಲಿ ನಡೆಸಿಕೊಂಡು ಬಂದಿದ್ದರು. ಅವರು ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದರು. ಅವರ ವಚನಗಳು ಬಹಳ ಅರ್ಥಗರ್ಭಿತವಾಗಿವೆ. ಅವುಗಳನ್ನು ನಾವು ಓದಿ ತಿಳಿದುಕೊಳ್ಳಬೇಕು. ಸಮಾಜದಲ್ಲಿ ಸೌಲಭ್ಯಗಳನ್ನು ಪಡೆಯಬೇಕಾದರೆ ನಾವು ಮೊದಲು ಶಿಕ್ಷತರಾಗಬೇಕೆಂದು ಹೇಳಿದರು.
ಸರಕಾರಿ ಪದವಿಪೂರ್ವ ಕಾಲೇಜು ಭಾಗ್ಯನಗರ ಇತಿಹಾಸ ಪ್ರಾಧ್ಯಾಪಕ ರಾಜಕುಮಾರ ಡಿ.ಎಸ್. ಅವರು ಅಂಬಿಗರ ಚೌಡಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅಂಬಿಗರ ಚೌಡಯ್ಯನವರು ತಮ್ಮ ಕಾಯಕ ನಿಷ್ಠಿಯ ಮೂಲಕ ಬಸವಣ್ಣನವರ ಪರಮ ಭಕ್ತರಾಗಿದ್ದರು. ಅವರು ಸರ್ವರ ಒಳಿತನ್ನೆ ಬಯಸಿದವರಾಗಿದ್ದರು. ಮಂಗಳೂರು ಮತ್ತು ಕಲಬುರಗಿ ವಿಶ್ವವಿದ್ಯಾಲಯಗಳಲ್ಲಿ ಅಂಬಿಗರ ಚೌಡಯ್ಯನವರ ಕುರಿತು ಅಧ್ಯಯನ ಪೀಠಗಳನ್ನೆ ತೆರೆಯಲಾಗಿದೆ. ಅವರ ವಚನಗಳು ಸಮಾಜದ ಗೊಡ್ಡು ಸಂಪ್ರದಾಯಗಳನ್ನು ಹೋಗಲಾಡಿಸುತ್ತವೆ ಎಂದು ಹೇಳಿದರು.
ಸಮಾಜದ ಮುಖಂಡರಾದ ರಾಜು ಕಲೆಗಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಯಂತಿ ಆಚರಣೆ ಪ್ರಯುಕ್ತ ಬುಧವಾರ ಬೆಳಿಗ್ಗೆ ಶ್ರೀ ಅಂಬಿಗರ ಚೌಡಯ್ಯ ಭಾವಚಿತ್ರದ ಮೆರವಣಿಗೆ ಕೊಪ್ಪಳ ನಗರದ ಶಿರಸಪ್ಪಯ್ಯನ ಮಠದಿಂದ ಗಡಿಯಾರ ಕಂಬದ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ವಿ. ಗಡಾದ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಮಹೇಶ ಮಾಲಗಿತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮಾಜದ ಮುಖಂಡರಾದ ಹುಲುಗಪ್ಪ ಭಾರಕೇರ್, ರಾಜು ಕಲೆಗಾರ್, ವಿರೂಪಾಕ್ಷ ಭಾರಕೇರ್, ಈರಪ್ಪ ಕರಿಗಾರ್, ರಮೇಶಪ್ಪ ಕಬ್ಬೇರ್, ಹುಲುಗಪ್ಪ ನರೇಗಲ್, ಶಿವ್ವಪ್ಪ ಕಬ್ಬೇರ್, ಉದಯ ಕಬ್ಬೇರ್, ಹನುಮಂತಪ್ಪ ಗಿಡ್ಡಾರಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹನುಮಂತಪ್ಪ ಎಲಿಗಾರ ಸೇರಿದಂತೆ ಸಮಾಜದ ಯುವಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್