
ಕೋಲಾರ, ೨೦ ಜನವರಿ (ಹಿ.ಸ) :
ಆ್ಯಂಕರ್ : ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಅಡಿ ಮಕ್ಕಳಿಗೆ ಶುಚಿ,ರುಚಿ,ಗುಣಮಟ್ಟದ ಊಟ ನೀಡುವ ಮೂಲಕ ಮಕ್ಕಳನ್ನು ಪ್ರೀತಿಯಿಂದ ಕಾಣಿ, ಅವರ ಅಪೌಷ್ಟಿಕತೆ ನಿವಾರಣೆಗೆ ಆದ್ಯತೆ ನೀಡಿ ಎಂದು ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಕರೆ ನೀಡಿದರು.
ಕೋಲಾರ ತಾಲ್ಲೂಕಿನ ಮುದುವಾಡಿ ಶಾಲೆಯಲ್ಲಿ ಮುದುವಾಡಿ , ಹೋಳೂರು , ಐತರಾಸನಸನಳ್ಳಿ ಮತ್ತು ತೋರದೇವಂಡಹಳ್ಳಿ ಕ್ಲಸ್ಟರ್ಸ್ ಅಡುಗೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳೇ ಎಂದು ಪರಿಗಣಿಸಿ, ಮನೆಯಲ್ಲಿ ನಿಮ್ಮ ಮಕ್ಕಳನ್ನು ಕಾಣುವಷ್ಟೇ ಪ್ರೀತಿಯಿಂದ ಅವರನ್ನೂ ಕಾಣಬೇಕು, ಅದು ನಿಮ್ಮ ಮಕ್ಕಳಿಗೂ ಶ್ರೇಯಸ್ಕರ. ಅಡುಗೆ ಕೋಣೆ ಶುಭ್ರವಾಗಿದ್ದರೆ ಮಾತ್ರ ಅಡುಗೆಯಲ್ಲೂ ಶುಚಿತ್ವ ಕಾಪಾಡಲು ಸಹಕಾರಿಯಾಗುತ್ತದೆ ಎಂಬುದನ್ನು ಅರಿತು ಗಮನಹರಿಸಿ, ಪಾತ್ರೆಗಳ ಸ್ವಚ್ಚತೆ, ಶುದ್ದ ಕುಡಿಯುವ ನೀರು, ಗುಣಮಟ್ಟದ ತರಕಾರಿ ಬಳಕೆ ಉತ್ತಮ ಬಿಸಿಯೂಟ ತಯಾರಿಕೆಗೆ ಅತಿ ಮುಖ್ಯವಾಗಿದೆ, ಇವುಗಳು ಮಕ್ಕಳ ಆರೋಗ್ಯ ರಕ್ಷಣೆಗೂ ಸಹಕಾರಿಯಾಗಲಿದ್ದು, ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದರು.
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆ ಸಹಾಯಕ ನಿರ್ದೇಶಕ ಸುಬ್ರಮಣಿ ಮಾತನಾಡಿ, ಅಕ್ಷರದಾಸೋಹ ಕಾರ್ಯಕ್ರಮವನ್ನು ಕೋಲಾರ ತಾಲ್ಲೂಕಿನಲ್ಲಿ ಅತ್ಯಂತ ಯಶಸ್ವಿಯಾಗಿ ಯಾವುದೇ ಸಮಸ್ಯೆಗಳಿಲ್ಲದಂತೆ ನಿರ್ವಹಿಸಿಕೊಂಡು ಬರುತ್ತಿದ್ದೇವೆ, ಅಡುಗೆ ಸಾಮಗ್ರಿಗಳ ನಿರ್ವಹಣೆ, ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಿ ಎಂದು ಕಿವಿಮಾತು ಹೇಳಿ, ಮಕ್ಕಳ ಹಾಜರಾತಿಗೆ ತಕ್ಕಂತೆ ಧಾನ್ಯಗಳ ಬಳಕೆ,ಸಂಗ್ರಹಣೆ ಇರಬೇಕು. ಬಿಸಿಯೂಟದ ಅಡುಗೆ ಮನೆಯಲ್ಲಿ ಮತ್ತು ಸುತ್ತ ಸ್ವಚ್ಚತೆಗೆ ಒತ್ತು ನೀಡಿ, ಸೊಳ್ಳೆಗಳ ಉತ್ಪತ್ತಿ ತಡೆಗೆ ಕ್ರಮವಹಿಸಿ, ಮಕ್ಕಳಿಗೆ ನೀಡುವ ಊಟದಲ್ಲಿ ಸ್ವಚ್ಚತೆ ಇಲ್ಲವಾದಲ್ಲಿ ಸಾಂಕ್ರಾಮಿಕ ರೋಗಗಳು ಬರುವ ಭೀತಿ ಇರುವುದರಿಂದ ಅಡುಗೆ ಸಿಬ್ಬಂದಿ ಗಮನಹರಿಸಿ, ಅಡುಗೆ ಪಾತ್ರೆಗಳನ್ನು ಚೆನ್ನಾಗಿ ತೊಳೆದು ಬಳಸಿ, ಶುದ್ದ ಕುಡಿಯುವ ನೀರನ್ನೇ ಅಡುಗೆಗೂ ಬಳಸಿ ಎಂದು ಹೇಳಿದರು.
ಚರಣ್ ತೇಜ್ ಇಂಡೇನ್ ಗ್ಯಾಸ್ ಗ್ರಾಮೀಣ ವಿತರಿಕ ಮಾಲೀಕರಾದ ಮಂಜುನಾಥ್ ಹಾಗೂ ಸುಬ್ರಮಣಿ ರವರು ಗ್ಯಾಸ್ ಸುರಕ್ಷಿತ ಬಗ್ಗೆ ಮಾಹಿತಿ ನೀಡಿದರು.
ಸಿಆರ್‌ಪಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕ ಸುರೇಶ ಭಾಗವಹಿಸಿ ಅಡುಗೆ ಸಿಬ್ಬಂದಿಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ರವೀಂದ್ರ ಬಾಬು ಶಿಕ್ಷಕರಾದ ಸೊನ್ನಪ್ಪ ಹಾಗೂ ಉಷಾ ಹಾಜರಿದ್ದರು.
ಚಿತ್ರ : ಅಕ್ಷರದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಕೋಲಾರ ತಾಲ್ಲೂಕಿನ ಮುದುವಾಡಿ ಶಾಲೆಯಲ್ಲಿ ಮುದುವಾಡಿ ಅಡುಗೆ ಸಿಬ್ಬಂದಿಗೆ ತರಬೇತಿ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್