
ಬಳ್ಳಾರಿ, 20 ಜನವರಿ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಎಲ್ಲಾ ಅಸಂಘಟಿತ ವಲಯ ಕಾರ್ಮಿಕರಿಗೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಂ.-ಎಸ್.ವೈಎಂ) ಪಿಂಚಣಿ ಯೋಜನೆಯಡಿ ಕಾರ್ಮಿಕರನ್ನು ನೋಂದಾಯಿಸಲು ವಿಶೇಷ ನೋಂದಣಿ ಅಭಿಯಾನ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಜಿ ಖೈನೂರು ಅವರು ತಿಳಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಫೆ.15 ರ ವರೆಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಫೆ.16 ರಿಂದ ಮಾ.15 ರವರೆಗೆ ವಿಶೇಷ ನೋಂದಣಿ ಅಭಿಯಾನ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ.
ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಮತ್ತು ಇದೇ ರೀತಿಯ ಇತರೆ ಉದ್ಯೋಗಗಳ ಕೆಲಸಗಾರರು ಅಸಂಘಟಿತ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವು ಪ್ರಧಾನಮಂತ್ರಿ ಶ್ರಮ್‍ಯೋಗಿ ಮಾನ್-ಧನ್ (ಪಿಎಂ-ಎಸ್‍ವೈಎಂ) ಎಂಬ ಮಹತ್ವಾಕಾಂಕ್ಷಿ ವಂತಿಗೆ ಆಧಾರಿತ ಪಿಂಚಣಿ ಯೋಜನೆ ಜಾರಿಗೆ ತಂದಿದೆ ಎಂದು ಅವರು ತಿಳಿಸಿದ್ದಾರೆ.
*ಅರ್ಹತೆ:*
ಯೋಜನೆಗೆ ಒಳಪಡುವ ಕಾರ್ಮಿಕರು ಅಸಂಘಟಿತ ವಲಯದ ಕಾರ್ಮಿಕರಾಗಿದ್ದು, 18 ರಿಂದ 40 ವರ್ಷದೊಳಗಿರಬೇಕು. ಅವರ ಮಾಸಿಕ ಆದಾಯ ರೂ.15,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಅವರು ಆದಾಯ ತೆರಿಗೆ/ಇ.ಎಸ್.ಐ/ಪಿ.ಎಫ್/ಎನ್.ಪಿ.ಎಸ್ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು.
ಬ್ಯಾಂಕ್ ಉಳಿತಾಯ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು.
*ನೋಂದಣಿ ವಿಧಾನ:*
ಅರ್ಹ ಅಸಂಘಟಿತ ಕಾರ್ಮಿಕರು ಹತ್ತಿರದ “ಕಾಮನ್ ಸರ್ವೀಸ್ ಸೆಂಟರ್ (ಸಿ.ಎಸ್.ಸಿ-ಕಂಪ್ಯೂಟರ್ ಸೆಂಟರ್)ಗಳಲ್ಲಿ ನೋಂದಾಯಿಸಬಹುದು. ಸಿ.ಎಸ್.ಸಿ.ಗಳ ವಿವರಗಳನ್ನು ಹತ್ತಿರದ ಎಲ್.ಐ.ಸಿ ಶಾಖೆ, ಕಾರ್ಮಿಕ ಇಲಾಖೆ, ಇ.ಎಸ್.ಐ. ಕಾರ್ಪೋರೇಷನ್ ಹಾಗೂ ಭವಿಷ್ಯನಿಧಿ ಸಂಘಟನೆಯ ಕಚೇರಿ ಹಾಗು ಇಲಾಖೆಯ ವೆಬ್ ಸೈಟ್ ವಿಳಾಸ ಹಾಗೂ ವೆಬ್ ಸೈಟ್ ವಿಳಾಸ hಣಣಠಿ://ಟoಛಿಚಿಣoಡಿ.ಛಿsಛಿಛಿಟouಜ.iಟಿ ನಲ್ಲಿ ಪಡೆಯಬಹುದು.
ಕಾರ್ಮಿಕರು ತಮ್ಮೊಂದಿಗೆ ಆರಂಭಿಕ ವಂತಿಕೆ ಮೊತ್ತ, ಆಧಾರ್ ಕಾರ್ಡ್, ಖಾತೆ ಹೊಂದಿರುವ ಬ್ಯಾಂಕಿನ ಐ.ಎಫ್.ಎಸ್.ಸಿ ಕೋಡ್ ವಿವರಗಳೊಂದಿಗೆ (ಬ್ಯಾಂಕ್ ಪಾಸ್‍ಪುಸ್ತಕ/ಚೆಕ್ ಪುಸ್ತಕ/ಬ್ಯಾಂಕ್ ಸ್ಟೇಟ್ ಮೆಂಟ್) ಅನ್ನು ತಮ್ಮ ನಾಮ ನಿರ್ದೇಶಿತರ ವಿವರಗಳು ಮತ್ತು ಮೊಬೈಲ್ ಹ್ಯಾಂಡ್‍ಸೆಟ್‍ನೊಂದಿಗೆ “ಕಾಮನ್ ಸರ್ವೀಸ್ ಸೆಂಟರ್’’ ಗಳಿಗೆ ತೆರಳುವುದು.
ಮೊದಲ ಕಂತಿನ ವಂತಿಕೆಯನ್ನು ನಗದು ರೂಪದಲ್ಲಿ ಪಾವತಿಸುವುದು ಹಾಗೂ ತದನಂತರ ಮಾಸಿಕ ವಂತಿಕೆಯನ್ನು ಅವರ ಖಾತೆಯಿಂದ ಆಟೋ-ಡೆಬಿಟ್ ಮೂಲಕ ಕಟಾವು ಮಾಡಿಕೊಳ್ಳಲಾಗುತ್ತದೆ.
*ಯೋಜನೆಯ ಸೌಲಭ್ಯ:*
ಕೇಂದ್ರ ಸರ್ಕಾರವು ಚಂದದಾರರು ಪಾವತಿಸುವ ವಂತಿಕೆಯನ್ನು ಸಮಾನಾಂತರ ವಂತಿಕೆಯನ್ನು ಪಿಂಚಣಿ ಖಾತೆಗೆ ಪಾವತಿಸುತ್ತದೆ. ಫಲಾನುಭವಿಯ ವಯಸ್ಸು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3,000 ರೂ.ಗಳ ಖಚಿತ ಕನಿಷ್ಠ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ.
ಚಂದದಾರರು 10 ವರ್ಷದೊಳಗಾಗಿ ಯೋಜನೆಯಿಂದ ನಿರ್ಗಮಿಸಿದಲ್ಲಿ ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಆ ಅವಧಿಗೆ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಯೊಂದಿಗೆ ಹಿಂದಿರುಗಿಸಲಾಗುತ್ತದೆ. 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ನಂತರ ನಿರ್ಗಮಿಸಿದಲ್ಲಿ ಅವರು ಪಾವತಿಸಿದ ವಂತಿಕೆಯೊಂದಿಗೆ ಪಿಂಚಣಿ ಖಾತೆಗೆ ಜಮೆಯಾಗಿರುವ ಬಡ್ಡಿ ಅಥವಾ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿ, ಇವುಗಳಲ್ಲಿ ಯಾವುದು ಹೆಚ್ಚು ಅದನ್ನು ಪಾವತಿಸಲಾಗುವುದು.
ಫಲಾನುಭವಿಯ ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದು, ಅವರು 60 ವರ್ಷ ಒಳಗಾಗಿ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗವಿಕಲತೆ ನ್ಯೂನತೆಯಿಂದ ವಂತಿಕೆಯನ್ನು ಪಾವತಿಸಲು ಸಾಧ್ಯವಾಗದಿದ್ದಲ್ಲಿ ಅವನ/ಅವಳ ಸಂಗಾತಿಯು ತದ ನಂತರ ಈ ಯೋಜನೆಗೆ ಸೇರಬಹುದಾಗಿದ್ದು, ವಂತಿಕೆಯನ್ನು ಪಾವತಿಸಿ ಮುಂದುವರೆಸಬಹುದಾಗಿದೆ. ಅವರ ವಂತಿಕೆಯನ್ನು ಬಡ್ಡಿಯೊಂದಿಗೆ ಪಡೆಯಲು ಅರ್ಹರಾಗಿರುತ್ತಾರೆ.
ಪಿಂಚಣಿ ಆರಂಭಗೊಂಡ ನಂತರ ಚಂದದಾರರು ಮೃತಪಟ್ಟಲ್ಲಿ, ಅವರ ಪತ್ನಿ/ಪತಿ ಮಾತ್ರ ಪಿಂಚಣಿಯ ಶೇ.50 ರಷ್ಟು ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಯ ವಿದ್ಯುನ್ಮಾನ ಆಧಾರಿತವಾಗಿದ್ದು, ಎಸ್.ಎಂ.ಎಸ್. ಮೂಲಕ ಎಲ್ಲಾ ವ್ಯವಹಾರಗಳ ಮಾಹಿತಿಯನ್ನು ಫಲಾನುಭವಿಗೆ ಕಾಲಕಾಲಕ್ಕೆ ತಿಳಿಸಲಾಗುವುದು.
ಮಾಹಿತಿಗಾಗಿ ಕಾರ್ಮಿಕರು ಹತ್ತಿರದ “ಕಾಮನ್ ಸರ್ವೀಸ್ ಸೆಂಟರ್ (ಸಿ.ಎಸ್.ಸಿ-ಕಂಪ್ಯೂಟರ್ ಸೆಂಟರ್) ಗಳಿಗೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗಾಗಿ ನಗರದ ಕೌಲ್ ಬಜಾರ್ ನ ಮೊಹಮ್ಮದೀಯ ಕಾಲೇಜು ಹಿಂಭಾಗದ ಬಳ್ಳಾರಿ ಉಪವಿಭಾಗದ ಕಾರ್ಮಿಕ ಭವನದ ಕಾರ್ಮಿಕ ಅಧಿಕಾರಿಗಳ ಕಚೇರಿ ಹಾಗೂ ಆಯಾ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರುಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್