
ಕೊಪ್ಪಳ, 20 ಜನವರಿ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಕ್ಷಯರೋಗಿಗಳ ಪತ್ತೆಯಲ್ಲಿ ಕೊಪ್ಪಳ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಭಾರತವನ್ನು 2025ರ ಒಳಗೆ ಕ್ಷಯ ಮುಕ್ತಗೊಳಿಸಲು ಕೇಂದ್ರ ಸರಕಾರವು ಕಾರ್ಯತಂತ್ರ ಯೋಜನೆಯನ್ನು ರೂಪಿಸಿದೆ. ಅದರಂತೆ ಕರ್ನಾಟಕ ಸರಕಾರವು ರಾಜ್ಯವನ್ನು ಕ್ಷಯರೋಗ (ಟಿಬಿ) ಮುಕ್ತಗೊಳಿಸಲು ರಾಷ್ಟ್ರೀಯ ಕಾರ್ಯತಂತ್ರ ಯೋಜನೆಗೆ ಅನುಗುಣವಾಗಿ ಕ್ಷಯಮುಕ್ತ ಕರ್ನಾಟಕ ಕಾರ್ಯತಂತ್ರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆಯ ಮುಖಾಂತರ ರಾಜ್ಯವನ್ನು ಕ್ಷಯ ಮುಕ್ತ ಕರ್ನಾಟಕವನ್ನಾಗಿಸುವ ದೃಷ್ಠಿಕೋನದಲ್ಲಿ ಕ್ಷಯರೋಗದ ಹೊರೆಯನ್ನು ಅವರ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ದುರ್ಬಲತೆಗಳನ್ನು ಕಡಿಮೆಗೊಳಿಸುವ ಗುರಿ ಹೊಂದಲಾಗಿದೆ.
ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಆಡಳಿತ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೊಪ್ಪಳ ಜಿಲ್ಲೆಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯಲ್ಲಿ ಟಿ.ಬಿ. ಗುರುವಾರ, ನಿಕ್ಷಯ್ ದಿವಸ, ವಿಭಿನ್ನ ಆರೈಕೆ ಮಾದರಿಯಡಿ ಕ್ಷಯರೋಗಿಗಳ ನೇರ ನಿಘಾವಣೆ, ಆಸ್ಪತ್ರೆಯ ಒಳರೋಗಿಗಳ ಕ್ಷಯರೋಗದ ತಪಾಸಣೆ, ಶಾಲಾ ಕಾಲೇಜು, ಕಾರ್ಖಾನೆಗಳು, ಗಣಿ ಪ್ರದೇಶ ಮತ್ತು ಕ್ವಾರಿಗಳಲ್ಲಿ ಕ್ಷಯರೋಗದ ಅರಿವು ಮತ್ತು ಜಾಗೃತಿಯನ್ನು ಮೂಡಿಸುವುದು ಮತ್ತು ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಕ್ಷಯರೋಗದ ಪರೀಕ್ಷೆಯ ಮೂಲಕ ಕ್ಷಯರೋಗದ ಪತ್ತೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಇರುವ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿರುವ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಕ್ಷಯರೋಗದ ಅರಿವು ಮತ್ತು ಜಾಗೃತಿಯನ್ನು ನೀಡುವುದು, ಕ್ಷಯಮುಕ್ತ ಪಂಚಾಯತಿ ಕಾರ್ಯಕ್ರಮದಡಿಯಲ್ಲಿ 2025ನೇ ಸಾಲಿನಲ್ಲಿ ಮಾನದಂಡಗಳ ಪ್ರಕಾರ 13 ಗ್ರಾಮ ಪಂಚಾಯತಿಗಳನ್ನು ಕ್ಷಯಮುಕ್ತ ಗ್ರಾಮ ಪಂಚಾಯತಿಗಳೆಂದು ಘೋಷಿಸಲು ಅರ್ಹತೆಯನ್ನು ಹೊಂದಿದ್ದು, ಪಂಚಾಯತಿಗಳಿಗೆ ವಿಶ್ವ ಕ್ಷಯರೋಗ ದಿನದಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ನೀಡಿ ಪುರಸ್ಕರಿಸಲಾಗುವುದು.
ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಜನರಲ್ಲಿ ಕ್ಷಯರೋಗದ ಅರಿವು ಮತ್ತು ಜಾಗೃತಿ ಹೆಚ್ಚಿಸುವುದರೊಂದಿಗೆ ಜನರಲ್ಲಿ ಕ್ಷಯರೋಗದ ಲಕ್ಷಣಗಳನ್ನು ಹೊಂದಿದವರು ಕ್ಷಯರೋಗದ ಪರೀಕ್ಷೆಗೆ ಒಳಪಡುವ ಸಂಖ್ಯೆಯು ಅಧಿಕವಾಗಿರುತ್ತದೆ. ಈ ಕಾರ್ಯಕ್ರಮದಿಂದಾಗಿ ಕ್ಷಯರೋಗಿಗಳಲ್ಲಿ ಕಳಂಕ, ತಾರತಮ್ಯ ಕಡಿಮೆ ಮಾಡಬಹುದಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ 2025ನೇ ಸಾಲಿನಲ್ಲಿ 49,040 ಸಂಶಯಾಸ್ಪದ ಕ್ಷಯರೋಗಿಗಳ ಪರೀಕ್ಷೆಯ ಗುರಿಯನ್ನು ಹೊಂದಲಾಗಿದ್ದು, ಅದರಲ್ಲಿ 58,529 ಸಂಶಯಾಸ್ಪದ ಕ್ಷಯರೋಗಿಗಳಿಗೆ ಕಫ ಪರೀಕ್ಷೆಯನ್ನು ಮಾಡುವ ಮೂಲಕ ಶೇ.119 ಗುರಿಯನ್ನು ಸಾಧಿಸಲಾಗಿರುತ್ತದೆ.
ಈ ಸಾಲಿನಲ್ಲಿ ಸರ್ಕಾರಿ ವಲಯದಲ್ಲಿ 2,130 ಮತ್ತು ಖಾಸಗಿ ವಲಯದಲ್ಲಿ 500 ಒಟ್ಟು 2,630 ಕ್ಷಯರೋಗಿಗಳ ಪತ್ತೆಯ(ಖಿಃ ಓoಣiಜಿiಛಿಚಿಣioಟಿ) ಗುರಿಯನ್ನು ಹೊಂದಲಾಗಿದ್ದು, ಅದರಲ್ಲಿ ಒಟ್ಟು 2,346 ಕ್ಷಯರೋಗಿಗಳನ್ನು ಸರ್ಕಾರಿ ವಲಯದಲ್ಲಿ ಮತ್ತು 313 ಖಾಸಗಿ ವಲಯದಲ್ಲಿ ಒಟ್ಟು 2,659 ಪತ್ತೆ ಮಾಡುವ ಮೂಲಕ ಶೇ.101 ಪ್ರಗತಿಯನ್ನು ಸಾಧಿಸುವ ಮೂಲಕ ಕೊಪ್ಪಳ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿರುತ್ತದೆ. ಅದರಲ್ಲಿ 105 ಬಹು ಔಷಧ ನಿರೋಧಕ ಕ್ಷಯರೋಗಿಗಳು ಪತ್ತೆಯಾಗಿರುತ್ತಾರೆ. ಶೇ.92 ಕ್ಷಯರೋಗಿಗಳು ಸಂಪೂರ್ಣ ಚಿಕಿತ್ಸೆಯನ್ನು ಪಡೆಯುವ ಮೂಲಕ ಯಶಸ್ಸಿನ ದರ ಹೆಚ್ಚಿದೆ.
2024-25ನೇ ಸಾಲಿನಲ್ಲಿ ನಿಕಟಪೂರ್ವ ಜಿಲ್ಲಾಧಿಕಾರಿಗಳಾದ ನಳಿನ್ ಅತುಲ್ ಅವರು ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ದಿ ನಿಗಮದ ಅನುದಾನದಿಂದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ, ಕೊಪ್ಪಳಕ್ಕಾಗಿ ಸುಮಾರು 84 ಲಕ್ಷ ರೂ.ಗಳ ಮೌಲ್ಯದ ಅತ್ಯಾಧುನಿಕ 4 ಸಿಬಿನಾಟ್ ಯಂತ್ರಗಳನ್ನು ಕ್ಷಯರೋಗ ಪರೀಕ್ಷೆಗಾಗಿ ಒದಗಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ಷಯರೋಗದ ಪರೀಕ್ಷೆಗಳನ್ನು ನಿರ್ವಹಿಸಲು ಅನುಕೂಲವಾಗಿರುತ್ತದೆ.
ಮುಂದುವರೆದು ರಾಜ್ಯದಲ್ಲೇ ನಿಗದಿತ ಗುರಿಯನ್ನು ಸಾಧಿಸಿ ಪ್ರಥಮ ಸ್ಥಾನ ಪಡೆಯಲು ಸಹಕಾರ ಮತ್ತು ಮಾರ್ಗದರ್ಶನ ನೀಡಿದ ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ. ಇಟ್ನಾಳ್ ಮತ್ತು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣೀತ್ ನೇಗಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜ್ ಟಿ. ರವರಿಗೆ ಹಾಗೂ ಎನ್.ಟಿ.ಇ.ಪಿ. ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಜಿಲ್ಲಾ ಕ್ಷಯರೋಗ ಮತ್ತು ಕುಷ್ಠರೋಗ ನಿರ್ಮೂಲನ ಅಧಿಕಾರಿ ಡಾ.ಶಶಿಧರ ಅವರು ಪ್ರಕಟಣೆ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್