
ಮೈಸೂರು, 20 ಜನವರಿ (ಹಿ.ಸ.) :
ಆ್ಯಂಕರ್ : ಮೈಸೂರಿನ ಸುತ್ತೂರು ಮಠದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಭಾರತವನ್ನು ಶ್ರೇಷ್ಠ ರಾಷ್ಟ್ರವಾಗಿಸಿರುವುದು ವಿಜ್ಞಾನ ಮತ್ತು ಆಧ್ಯಾತ್ಮದ ಸಮನ್ವಯವೇ ಎಂದು ಹೇಳಿದರು.
ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸುತ್ತೂರು ಜಾತ್ರೆ ಕೇವಲ ಧಾರ್ಮಿಕ ಉತ್ಸವವಲ್ಲ; ಇದು ಜನಜೀವನಕ್ಕೆ ನೇರವಾಗಿ ಸಂಬಂಧಿಸಿದ ಕೃಷಿ, ತೋಟಗಾರಿಕೆ, ಪಶುಪಾಲನೆ ಸೇರಿದಂತೆ ಹಲವು ಕ್ಷೇತ್ರಗಳ ಮಾಹಿತಿ ಮತ್ತು ಜ್ಞಾನವನ್ನು ನೀಡುವ ಮಹತ್ವದ ವೇದಿಕೆ ಎಂದರು. ಉತ್ಸವದ ಅಂಗವಾಗಿ ನಡೆಯುತ್ತಿರುವ ಕೃಷಿ ಮತ್ತು ಹಸುಗಳ ಜಾತ್ರೆ ನಾಡಿನ ಪ್ರತಿಷ್ಠಿತ ಜಾತ್ರೆಗಳಲ್ಲೊಂದು ಎಂದು ಅವರು ಬಣ್ಣಿಸಿದರು.
“ಒಂದೆಡೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ವಿಜ್ಞಾನ, ಚಿಂತನೆ ಮತ್ತು ವಿಚಾರ ವಿನಿಮಯದ ಗೋಷ್ಠಿಗಳು ನಡೆಯುತ್ತಿವೆ. ಎಲ್ಲರನ್ನು, ಎಲ್ಲವನ್ನೂ ಪ್ರೀತಿಸುವ, ಗೌರವಿಸುವ ಸಹಬಾಳ್ವೆಯ ಪರಂಪರೆ ಸುತ್ತೂರು ಜಾತ್ರೆಯ ವೈಶಿಷ್ಟ್ಯ,” ಎಂದು ಸಚಿವರು ಹೇಳಿದರು.
ಸ್ವಾತಂತ್ರ್ಯಾನಂತರ ದೇಶದ ದೊಡ್ಡ ಸವಾಲು ಎಲ್ಲರಿಗೂ ಆಹಾರ ಒದಗಿಸುವುದಾಗಿತ್ತು. ಆಹಾರ ಕ್ರಾಂತಿಯ ಮೂಲಕ ಆ ಗುರಿ ಸಾಧಿಸಲಾಗಿದೆ. ಆದರೆ ಮುಂದಿನ ಹಂತದಲ್ಲಿ ಶುದ್ಧ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಜನಜಾಗೃತಿ ಮೂಡಿಸುವ ಕ್ರಾಂತಿ ಅಗತ್ಯವಿದೆ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಸುತ್ತೂರು ಮಠವು ಆಧ್ಯಾತ್ಮ, ವಿಜ್ಞಾನ, ಶಿಕ್ಷಣ, ಜನಸೇವೆ, ಅನ್ನದಾಸೋಹ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸುತ್ತಿದೆ. ದೇಶದ ಟಾಪ್ 10 ಫಾರ್ಮಸಿ ಕಾಲೇಜುಗಳ ಪೈಕಿ ಸುತ್ತೂರು ಮಠದ ಎರಡು ಕಾಲೇಜುಗಳು ಸ್ಥಾನ ಪಡೆದಿರುವುದು ಮಠದ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa