
ಚಿತ್ರದುರ್ಗ, 20 ಜನವರಿ (ಹಿ.ಸ.) :
ಆ್ಯಂಕರ್ : ಸಮಾನತೆಗೆ ಪೂರಕವಾಗಿ ಬಡ ಜನರಿಗಾಗಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಬಡವರ ಪರ ನಿಲ್ಲುವ ಏಕೈಕ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಕುರಿತ ಜಾಗೃತಿ ಮೂಡಿಸುವ ವಿಶೇಷ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಮೂಲಭೂತ ಸೌಕರ್ಯಗಳು, ಅಭಿವೃದ್ಧಿಯ ಜತೆಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವುದು ಬಹಳ ಸಂತೋಷದಾಯಕವಾದುದು. ರಾಜ್ಯ ಸರ್ಕಾರ ಈಗಾಗಲೇ ಎರಡೂವರೆ ವರ್ಷ ಪೂರೈಸಿದ್ದು, ಚುನಾವಣೆ ಪೂರ್ವದಲ್ಲಿ ರಾಜ್ಯದ ಜನರಿಗೆ ನೀಡಿದ್ದ ಆಶ್ವಾಸನೆಯಂತೆ, ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಬಡವರ, ದೀನದಲಿತರ, ರೈತರ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರ ಜಾರಿಗೊಳಿಸಿದ ಯೋಜನೆಗಳು ಜನಪ್ರಿಯವಾಗಿವೆ. ಈ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಿದ್ದು, ಆರ್ಥಿಕವಾಗಿ ಸಬಲರನ್ನಾಗಿ ಮಾಡಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳು ಒಂದು ಜಾತಿ, ಧರ್ಮ ಅಥವಾ ಪಕ್ಷಕ್ಕೆ ಸೀಮಿತವಾಗಿಲ್ಲ. ಅರ್ಹತೆ ಇರುವ ಎಲ್ಲ ಫಲಾನುಭವಿಗಳಿಗೂ ಸಹ ಗ್ಯಾರಂಟಿ ಯೋಜನೆಗಳು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ತಲುಪುತ್ತಿವೆ. ಆದರೆ ವಿಪಕ್ಷದವರು ರಾಜಕಾರಣ ಮಾಡಿ, ಸುಳ್ಳುಗಳನ್ನು ಹೇಳುವ ಮೂಲಕ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ ಅವರು, ನಮ್ಮ ಸರ್ಕಾರ ಬಡಜನರಿಗಾಗಿ, ಮಹಿಳೆಯರಿಗಾಗಿ, ಕಾರ್ಮಿಕರಿಗಾಗಿ, ವಿದ್ಯಾರ್ಥಿಗಳಿಗಾಗಿ ಯೋಜನೆಗಳನ್ನು ರೂಪಿಸಿ, ಸೌಲಭ್ಯಗಳನ್ನು ತಲುಪಿಸುತ್ತಿದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa