ಕೆಜಿಎಫ್‌ನಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ವಸತಿ ಗೃಹಗಳ ಶಂಕು ಸ್ಥಾಪನೆ
ಕೆಜಿಎಫ್‌ನಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ವಸತಿ ಗೃಹಗಳ ಶಂಕು ಸ್ಥಾಪನೆ
ಕೆಜಿಎಫ್ ನಗರದಲ್ಲಿ ನಿರ್ಮಾಣವಾಗಲಿರುವ ರಾಜ್ಯ ಪೊಲೀಸ್ ಮೀಸಲು ಪಡೆಯ ವಸತಿ ಗೃಹಗಳಿಗೆ ಗೃಹ ಸಚಿವ ಡಾ.ಪರಮೇಶ್ವರ್ ಶಂಕುಸ್ಥಾಪನೆ ಮಾಡಿದರು.


ಕೋಲಾರ ೨೦ ಜನವರಿ (ಹಿ.ಸ) :

ಆ್ಯಂಕರ್ : ಚಿನ್ನದ ನಾಡು ಕೆ.ಜಿ.ಎಫ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯ ಹಿತರಕ್ಷಣೆ ಮತ್ತು ಇಲಾಖೆಯ ಬಲವರ್ಧನೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ಇಂದು ಕೆ.ಜಿ.ಎಫ್‌ನ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ೧೦ನೇ ಬೆಟಾಲಿಯನ್ ಆವರಣದಲ್ಲಿ ನೂತನ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಸಮಾರಂಭದಲ್ಲಿ ಶಾಸಕಿ ಡಾ. ರೂಪಕಲಾ ಶಶಿಧರ್ ಅವರ ಅಭಿವೃದ್ಧಿ ಕಾಳಜಿಯನ್ನು ಮುಕ್ತಕಂಠದಿ0ದ ಶ್ಲಾಘಿಸಿದ ಸಚಿವರು, ರೂಪಕಲಾ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಅತ್ಯಂತ ವ್ಯವಸ್ಥಿತವಾದ 'ಬ್ಲೂ ಪ್ರಿಂಟ್' (ನೀಲನಕ್ಷೆ) ಸಿದ್ಧಪಡಿಸಿದ್ದಾರೆ. ಮಹಿಳೆಯಾಗಿ ಸಾರ್ವಜನಿಕ ಜೀವನದ ಸವಾಲುಗಳನ್ನು ಮೆಟ್ಟಿ ನಿಂತು ಅವರು ಮಾಡುತ್ತಿರುವ ಕೆಲಸ ಇತರರಿಗೆ ಮಾದರಿ, ಎಂದರು.

ಅಲ್ಲದೆ, ಕೆ.ಜಿ.ಎಫ್ ಗಣಿಯ ಇತಿಹಾಸವನ್ನು ಸ್ಮರಿಸಿದ ಅವರು, ದೇಶದ ಆರ್ಥಿಕತೆಗೆ ೮೦೦ ಟನ್ ಚಿನ್ನ ನೀಡಿದ ಈ ಮಣ್ಣಿನ ಋಣ ತೀರಿಸುವುದು ಸರ್ಕಾರದ ಕರ್ತವ್ಯ ಎಂದು ಭಾವುಕರಾದರು.

ಇಲಾಖೆಯಲ್ಲಿ ಖಾಲಿ ಇರುವ ೧೫,೦೦೦ ಹುದ್ದೆಗಳ ಪೈಕಿ ಈ ವರ್ಷ ೧೦,೦೦೦ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸೈಬರ್ ಅಪರಾಧ ತಡೆಯಲು ೧.೧೦ ಲಕ್ಷ ಸಿಬ್ಬಂದಿಗೆ ವಿಶೇಷ ತರಬೇತಿ ಹಾಗೂ 'ಮನೆ ಮನೆಗೆ ಪೊಲೀಸ್' ಯೋಜನೆಯ ಮೂಲಕ ಜನಸ್ನೇಹಿ ಆಡಳಿತ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಕ್ಷೇತ್ರದ ಗತವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಶಾಸಕಿ ಎಂ. ರೂಪಕಲಾ ಶಶಿಧರ್ ಅವರು ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ ಎಂದರು.

ಶಾಸಕಿ ಡಾ. ರೂಪಕಲಾ ಶಶಿಧರ್ ಮಾತನಾಡಿ ಸುಮಾರು ೧೦೦ ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ 'ಇಂಡಿಯನ್ ರಿಸರ್ವ್ ಪೊಲೀಸ್' ತರಬೇತಿ ಕೇಂದ್ರದ ನಿರ್ಮಾಣಕ್ಕೆ ಅಧಿಕೃತವಾಗಿ ಇಂದು ಚಾಲನೆ ನೀಡಲಾಗಿದೆ ಎಂದರು. ಮೊದಲ ಹಂತದಲ್ಲಿ ೩೦ ಕೋಟಿ ವೆಚ್ಚದಲ್ಲಿ ತರಬೇತಿ ಕೇಂದ್ರ ಮತ್ತು ವಸತಿ ಸಂಕೀರ್ಣ ನಿರ್ಮಾಣ ಮಾಡಲಾಗುವುದು.

ಸುಮಾರು ೧,೦೦೦ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಇಲ್ಲಿ ನೆಲೆ ಸಿಗಲಿದೆ. ಜನಸಂಖ್ಯೆ ಹೆಚ್ಚಳದಿಂದ ಸ್ಥಳೀಯ ವ್ಯಾಪಾರ-ವಹಿವಾಟುಗಳಿಗೆ ಉತ್ತೇಜನ ದೊರೆಯಲಿದೆ. ಕೆಜಿಎಫ್‌ನಲ್ಲಿ ಲಭ್ಯವಿರುವ ಕೈಗಾರಿಕಾ ಭೂಮಿಗೆ ಈ ಕೇಂದ್ರವು ಹೆಚ್ಚಿನ ಭದ್ರತೆ ನೀಡಲಿದ್ದು, ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್‌ವೇ ಸನಿಹದಲ್ಲಿರುವುದರಿಂದ ಈ ಭಾಗವು 'ಮ್ಯಾನುಫ್ಯಾಕ್ಚರಿಂಗ್ ಹಬ್' ಆಗಿ ಬದಲಾಗಲಿದೆ. ಇದರಿಂದ ಸ್ಥಳೀಯ ಯುವಕರಿಗೆ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಈ ೧೦೦ ಎಕರೆ ಪ್ರದೇಶದಲ್ಲಿ ಪ್ಲಾಂಟೇಶನ್ ಮಾಡುವ ಮೂಲಕ ಹಸಿರು ಆವರಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಂಗಾರಪೇಟೆ ಶಾಸಕ ಎಸ್. ಏನ್.ನಾರಾಯಣಸ್ವಾಮಿ, ಅರುಣ್ ಚಕ್ರವರ್ತಿ, ಕೇಂದ್ರ ಐಜಿಪಿ ನಗುರಂ, ಸಂದೀಪ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಸ್ ಎಂ ಮಂಗಳ, ಕೆಜಿಎಫ್ ತಹಶೀಲ್ದಾರ್ ಭರತ್, ಬಂಗಾರಪೇಟೆ ತಹಶೀಲ್ದಾರ್ ಸುಜಾತಾ ಭಾಗವಹಿಸಿದ್ದರು.

ಚಿತ್ರ : ಕೆಜಿಎಫ್ ನಗರದಲ್ಲಿ ನಿರ್ಮಾಣವಾಗಲಿರುವ ರಾಜ್ಯ ಪೊಲೀಸ್ ಮೀಸಲು ಪಡೆಯ ವಸತಿ ಗೃಹಗಳಿಗೆ ಗೃಹ ಸಚಿವ ಡಾ.ಪರಮೇಶ್ವರ್ ಶಂಕುಸ್ಥಾಪನೆ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande