
ಚಿತ್ರದುರ್ಗ, 20 ಜನವರಿ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಸುಸ್ಥಿರ ಅಭಿವೃದ್ಧಿಗೆ ನಿಖರ ಹಾಗೂ ವಾಸ್ತವ ಅಂಕಿ ಅಂಶಗಳ ಕ್ರೋಢೀಕರಣ ಅತ್ಯವಶ್ಯಕವಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಓ ಡಾ. ಆಕಾಶ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾನವ ಅಭಿವೃದ್ಧಿ ವರದಿ–2025 ಹಾಗೂ ಸಮಗ್ರ–ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ–2031 ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿಯೇ ಅತಿ ಕಡಿಮೆ ತಲಾ ಆದಾಯ ಹೊಂದಿದ್ದು, ರಾಜ್ಯದ ಸರಾಸರಿ ತಲಾ ಆದಾಯ ರೂ.3 ಲಕ್ಷವಾಗಿದ್ದರೆ, ಜಿಲ್ಲೆಯದು ರೂ.1.77 ಲಕ್ಷ ಮಾತ್ರವಾಗಿದೆ ಎಂದು ಹೇಳಿದರು. ಶಿಕ್ಷಣ, ಆರೋಗ್ಯ, ಪೌಷ್ಠಿಕಾಂಶ, ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಜಿಲ್ಲೆ ಹಿಂದುಳಿದಿದ್ದು, ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಸಾಧನೆ ತೀರಾ ಕಳಪೆ ಮಟ್ಟದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಪರಿಣಾಮಕಾರಿ ಯೋಜನೆ ರೂಪಿಸಲು ಅಧಿಕಾರಿಗಳು ನೀಡುವ ಅಂಕಿ ಅಂಶಗಳು ವಾಸ್ತವಾಧಾರಿತವಾಗಿರಬೇಕು; ಯಾವುದೇ ಕಾರಣಕ್ಕೂ ಕಲ್ಪಿತ ಅಥವಾ ಸುಳ್ಳು ಮಾಹಿತಿಯನ್ನು ನೀಡಬಾರದು ಎಂದು ಸೂಚಿಸಿದರು. ಪ್ರತಿಮಾಸ ಅಂಕಿ ಅಂಶಗಳ ಪರಿಶೀಲನೆಗಾಗಿ ಸಭೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಯೋಜನೆ ಮತ್ತು ಅಂಕಿ ಸಂಖ್ಯೆ ಸಂಗ್ರಹಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಸವರಾಜ್ ಎಸ್. ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa