
ಕೋಲಾರ ೨೦ ಜನವರಿ (ಹಿ.ಸ) :
ಆ್ಯಂಕರ್ : ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಬಂಗಾರಪೇಟೆ ಮಾರ್ಗವಾಗಿ ಮಾರಿಕುಪ್ಪಂಗೆ ರೈಲು ಸಂಖ್ಯೆ ೬೬೫೩೨ ಕಾರ್ಯಾಚರಣೆ ಮುಂದುವರೆಸುವ0ತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕೆಜಿಎಫ್ ಮತ್ತು ಬಂಗಾರಪೇಟೆ ತಾಲ್ಲೂಕು ಸಮಿತಿಗಳಿಂದ ಬಂಗಾರಪೇಟೆ ರೈಲ್ವೆ ನಿಲ್ದಾಣದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಒತ್ತಾಯಿಸಲಾಯಿತು.
ಜಿಲ್ಲಾ ಸಮಿತಿ ಸದಸ್ಯ ಪಿ.ಶ್ರೀನಿವಾಸ್ ಮಾತನಾಡಿ ಕೆಜಿಎಫ್, ಬಂಗಾರಪೇಟೆ, ಮಾಲೂರು ತಾಲ್ಲೂಕುಗಳಿಂದ ಪ್ರತಿದಿನ ೨೦ ಸಾವಿರಕ್ಕೂ ಹೆಚ್ಚು ಜನರು ದಿನನಿತ್ಯ ಕೆಲಸಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಈ ನಿಲ್ದಾಣಗಳಿಂದ ಬೆಂಗಳೂರಿಗೆ ಆಗಾಗ್ಗೆ ಪ್ರಯಾಣಿಸುವ ನೂರಾರು ವಿವಿಧ ವರ್ಗದ ಜನರಿದ್ದಾರೆ. ಬಹುತೇಕ ಜನರಿಗೆ ರೈಲುಗಳು ಏಕೈಕ ಸಾರಿಗೆ ಸಾಧನವಾಗಿದೆ. ಮತ್ತು ಕೆಜಿಎಫ್, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳಲ್ಲಿ ವಾಸಿಸುವ ಜನರ ಜೀವನೋಪಾಯಕ್ಕೆ ಇದು ಪ್ರಮುಖ ಆಧಾರವಾಗಿದೆ. ಈ ನಿಲ್ದಾಣಗಳಲ್ಲಿ ಆದಾಯ ಗಳಿಸುವಲ್ಲಿ ದೈನಂದಿನ ಪ್ರಯಾಣಿಕರ ಕೊಡುಗೆ ಗಣನೀಯವಾಗಿದೆ. ರೈಲು ಸಂಖ್ಯೆ: ೬೬೫೩೨ ಮೂಲತಃ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಮಾರಿಕುಪ್ಪಂವರೆಗೆ ಕಾರ್ಯನಿರ್ವಹಿಸುತ್ತಿತ್ತು ಎಂದು ನಿಮಗೆ ತಿಳಿದ ವಿಷಯವಾಗಿದೆ. ಈ ನಿಲ್ದಾಣದಿಂದ ಹೊರಡುವ ಸಮಯ ಮಧ್ಯಾಹ್ನ ೨.೫೫ ಆಗಿತ್ತು ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎ.ಆರ್.ಬಾಬು ಮಾತನಾಡಿ, ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಈ ರೈಲು ಹೊರಡುವ ಸಮಯವನ್ನು ಮಧ್ಯಾಹ್ನ ೨.೫೫ಕ್ಕೆ ನಿಗಧಿಪಡಿಸಲು ಮುಖ್ಯ ಕಾರಣವೇನೆಂದರೆ, ಎಚ್‌ಎಎಲ್, ಬಿಇಎಂಎಲ್ ಮುಂತಾದ ಕಾರ್ಖಾನೆಗಳಲ್ಲಿ ಮೊದಲ ಪಾಳಿಯಲ್ಲಿ ಕೆಲಸಕ್ಕಾಗಿ ಬೆಂಗಳೂರಿನ ಕಡೆಗೆ ಪ್ರಯಾಣಿಸುವ ಸಾವಿರಾರು ಜನರು ಕೆಲಸ ಮುಗಿಸಿ ಮಾರಿಕುಪ್ಪಂ ಕಡೆಗೆ ಹಿಂತಿರುಗುತ್ತಾರೆ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣ, ಕೃಷ್ಣರಾಜಪುರಂ, ವೈಟ್‌ಫೀಲ್ಡ್ನಲ್ಲಿ ಈ ರೈಲನ್ನು ಹತ್ತಲು ಸಾಧ್ಯವಾಗುವಂತೆ ಮಾಡುವುದು. ಈ ರೈಲಿನ ಪ್ರಾರಂಭದ ನಿಲ್ದಾಣವನ್ನು ವೈಟ್‌ಫೀಲ್ಡ್ಗೆ ಬದಲಾಯಿಸಲಾಯಿತು. ನಾವು ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮೂಲ ಮತ್ತು ನಿರ್ಗಮನ ಸಮಯವನ್ನು ಪುನಃಸ್ಥಾಪಿಸಲಾಗುವುದು ಎಂದು ಅವರು ನಮಗೆ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಈ ಭರವಸೆ ಈಡೇರಿರುವುದಿಲ್ಲ ಆರೋಪಿಸಿದರು.
ಕೆಜಿಎಫ್ ತಾಲ್ಲೂಕು ಕಾರ್ಯದರ್ಶಿ ಪಿ.ತಂಗರಾಜ್ ಮಾತನಾಡಿ, ನಿಲ್ದಾಣದ ಮೂಲ ಮತ್ತು ಸಮಯದ ಬದಲಾವಣೆಯು ಸಾವಿರಾರು ಕಾರ್ಮಿಕರ ಜೀವನವನ್ನು ದುಸ್ತರಗೊಳಿಸಿದೆ. ಬೃಂದಾವನ್ ಎಕ್ಸ್ಪ್ರೆಸ್‌ನಂತಹ ರೈಲುಗಳನ್ನು ಹತ್ತಿ ಕೆಜಿಎಫ್‌ಗೆ ಮುಂದಿನ ಪ್ರಯಾಣಕ್ಕಾಗಿ ಬಂಗಾರಪೇಟೆ ಜಂಕ್ಷನಲ್ಲಿ ಕಾಯುವ ಸಾವಿರಾರು ಕಾರ್ಮಿಕರು ಬೃಂದಾವನ್ ಎಕ್ಸ್ಪ್ರೆಸ್ ಬಂಗಾರಪೇಟೆ ಜಂಕ್ಷನ್ ತಲುಪುವ ಮುನ್ನವೇ ಈ ರೈಲು (೬೬೫೩೨) ಬಂಗಾರಪೇಟೆ ಜಂಕ್ಷನ್‌ನಿAದ ಮಾರಿಕುಪ್ಪಂ ಕಡೆಗೆ ಹೊರಡುವುದರಿಂದ ತೀವ್ರವಾಗಿ ತೊಂದರೆಗೆ ಒಳಗಾಗುತ್ತಿದ್ದಾರೆ. ಅನೇಕ ಸೂಪರ್ ಪಾಸ್ಟ್ ಎಕ್ಸ್ಪ್ರೆಸ್ ರೈಲುಗಳು ವೈಟ್‌ಫೀಲ್ಡ್ನಲ್ಲಿ ನಿಲ್ಲುವುದಿಲ್ಲ. ಅವರಿಗೆ ಹತ್ತಲು ಬೇರೆ ರೈಲುಗಳಿಲ್ಲ. ಆದ್ದರಿಂದ ನಂತರ ಬರುವ ಕಿಕ್ಕಿರಿದ ಪ್ಯಾಸೆಂಜರ್ ರೈಲುಗಳಲ್ಲಿ ಹತ್ತಬೇಕಾಗುತ್ತದೆ ಎಂದು ತಿಳಿಸಿದರು.
ಆದ್ದರಿಂದ ದೈನಂದಿನ ಪ್ರಯಾಣಿಕರು ಎದುರಿಸುತ್ತಿರುವ ತೀವ್ರ ತೊಂದರೆಗಳನ್ನು ಪರಿಶೀಲಿಸಿ, ವಿಶೇಷವಾಗಿ ದೈನಂದಿನ ಪ್ರಯಾಣಿಕರ ಹಿತದೃಷ್ಠಿಯಿಂದ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ರೈಲು ಸಂಖ್ಯೆ ೬೬೫೩೨ ರ ಸೇವೆಗಳನ್ನು ಪುನಃಸ್ಥಾಪಿಸಲು ತಾವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ನಂತರ ಬಂಗಾರಪೇಟೆ ರೈಲ್ವೆ ನಿಲ್ದಾಣದ ವ್ಯವಸ್ಥಾಪಕರ ಮೂಲಕ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಟಿ.ಅಪ್ಪಯ್ಯಣ್ಣ, ಎಸ್.ಡಿ.ಆನಂದನ್, ಎ.ಪಿಚ್ಚಕಣ್ಣು, ಸಿ.ಆರ್.ಮೂರ್ತಿ, ತಿರುಪತಿ, ಪಿ.ಆನಂದ್‌ರಾಜ್, ನಿರೇಶ್‌ಬಾಬು, ವಿಜಯನ್, ಎ.ಸಿ.ವೇಲಾಯುದನ್, ಲಿಯೋರಾಜ, ಶಾಂತ್‌ಕುಮಾರ್, ನಿಕ್ಸನ್ ಭಾಗಿಯಾಗಿದ್ದರು.
ಚಿತ್ರ : ಕೆಆರ್‌ಎಸ್ ನಿಲ್ದಾಣದಿಂದ ಕೆಜಿಎಫ್ ಮಾರಿಕುಪ್ಪಂಗೆ ಮಧ್ಯಾಹ್ನ ರೈಲು ಸಂಚಾರವನ್ನು ಮುಂದುವರೆಸುವ0ತೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಬಂಗಾರಪೇಟೆ ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್