

ಬಳ್ಳಾರಿ, 20 ಜನವರಿ (ಹಿ.ಸ.) :
ಆ್ಯಂಕರ್ : ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ಮಂಗಳವಾರ ಭೇಟಿ ನೀಡಿದ್ದ ದಕ್ಷಿಣ ಮಧ್ಯ ರೈಲ್ವೆ ವಲಯದ ಜನರಲ್ ಮೇನೇಜರ್ ಸಂಜಯ್ ಕುಮಾರ್ ಶ್ರೀವಾತ್ಸವ ಹಾಗೂ ಗುಂತಕಲ್ ರೈಲ್ವೆ ವಿಭಾಗದ ಮೇನೇಜರ್ ಚಂದ್ರಶೇಖರ್ ಗುಪ್ತ ಅವರನ್ನು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯು ಭೇಟಿ ಮಾಡಿ, ರೈಲು ಮಾರ್ಗಗಳ ಕುರಿತು ಮನವಿ ಸಲ್ಲಿಸಿದೆ.
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷರಾಗಿರುವ ಕೆ.ಎಂ. ಮಹೇಶ್ವರ ಸ್ವಾಮಿ ಅವರ ನೇತೃತ್ವದಲ್ಲಿ ಭೇಟಿ ಮಾಡಿದ ನಿಯೋಗವು, ಗುಂತಕಲ್ಲು ರೈಲ್ವೆ ನಿಲ್ದಾಣದಿಂದ ದೇಶದ ನಾನಾ ಭಾಗಗಳಿಗೆ ಸಂಚರಿಸಲು ಸಾಕಷ್ಟು ರೈಲುಗಳಿವೆ. ಗುಂತಕಲ್ಲಿಗೆ ಹೊಂದಿಕೊಂಡಿರುವ ಬಳ್ಳಾರಿಯ ಪ್ರಯಾಣಿಕರು ಗುಂತಕಲ್ಲು ಜಂಕ್ಷನ್‍ನಿಂದ ದೇಶದ ವಿವಿಧೆಡೆ ಪ್ರಯಾಣಿಸಬೇಕಾಗಿದೆ. ಆದರೆ, ಬಳ್ಳಾರಿಯಿಂದ ಗುಂತಕಲ್ಲುಗೆ, ಗುಂತಕಲ್ಲಿನಿಂದ ಬಳ್ಳಾರಿಗೆ ಪ್ರಯಾಣಿಕರ ರೈಲುಗಳ ಸೌಲಭ್ಯವಿಲ್ಲವಾಗಿದೆ. ಕಾರಣ ಬಳ್ಳಾರಿ - ಗುಂತಕಲ್ಲು ಮಧ್ಯೆ ನಿತ್ಯ ನಾಲ್ಕು ರೈಲುಗಳ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರ ಸರ್ಕಾರ ರೈಲ್ವೆ ಬಜೆಟ್‍ನಲ್ಲಿ ಘೋಷಣೆ ಮಾಡಿರುವ ಕೊಲ್ಲಾಪುರ - ಬೆಳಗಾವಿ - ಮನುಗೂರು ಮಧ್ಯೆ ಪ್ರತಿನಿತ್ಯ ಎಕ್ಸ್‍ಪ್ರೆಸ್ ರೈಲು ಪುನರಾರಂಭ ಆಗಬೇಕು. ಆದರೆ, ಈ ರೈಲಿನ ಸಂಚಾರಕ್ಕೆ ಅಧಿಕಾರಿಗಳು ಹೆಚ್ಚಿನ ಆಸಕ್ತಿ ತೋರಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು.
ಬಳ್ಳಾರಿ ಹಗರಿ ಮೂಲಕ ಆದೋನಿಗೆ ನೇರ ರೈಲ್ವೆ ಸಂಪರ್ಕ ಕಲ್ಪಿಸಿ ಆಲೂರು ಮಾರ್ಗವಾಗಿ ನೂತನ ಬ್ರಾಡ್‍ಗೇಜ್ ರೈಲು ಮಾರ್ಗವನ್ನು ಪ್ರಾರಂಭಿಸಬೇಕು. ಗುಂತಕಲ್ಲು ರೈಲ್ವೆ ನಿಲ್ದಾಣದಿಂದ ಮುಂಬೈ - ಹೈದರಾಬಾದ - ವಾರಣಾಸಿ ರೈಲನ್ನು ಆದೋನಿ ಮೂಲಕ ಬಳ್ಳಾರಿ ತಲುಪುವ ವ್ಯವಸ್ಥೆ ಆದಲ್ಲಿ ಅನುಕೂಲವಾಗಲಿದೆ.
ಸೇತುವೆ
ಬಳ್ಳಾರಿಯ ರಾಘವೇಂದ್ರ ಕಾಲೋನಿಯ ಅಯ್ಯಪ್ಪಸ್ವಾಮಿ ದೇವಸ್ಥಾನದ ರಸ್ತೆಯಿಂದ ಬಸವೇಶ್ವರ ನಗರದ ಪಕ್ಕದಿಂದ ಸಂಗನಕಲ್ಲು ರಸ್ತೆ ಸಂಪರ್ಕಿಸಲು ರೈಲ್ವೆ ಹಳಿ ಕಿ.ಮೀ. ಸಂಖ್ಯೆ 211 ಹತ್ತಿರ 30 ಅಡಿ ಅಗಲದ ಓವರ್ ಬ್ರಿಡ್ಜ್ ಸೇತುವೆ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ರೈಲ್ವೆ ಸಚಿವರು ಮತ್ತು ನೈರುತ್ಯ ರೈಲ್ವೆಗೆ ಮನವಿ ಸಲ್ಲಿಸಲಾಯಿತು.
ಡಿಆರ್‍ಯುಸಿಸಿ ಸದಸ್ಯರಾದ ಕೆ.ಎಂ. ಕೊಟ್ರೇಶ್, ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ. ಗೌರಿಶಂಕರ, ಮುಖಂಡರಾದ ಡಾ. ದರೂರ್ ಪುರುಷೋತ್ತಮ್ ಗೌಡ, ಪಿ.ಎಸ್. ಸೋಮಲಿಂಗನಗೌಡ, ಪಿ. ಬಂಡೇಗೌಡ, ಗಂಗಾವತಿ ವೀರೇಶ್, ಕಣೇಕಲ್ಲು ಎರ್ರಿಸ್ವಾಮಿ, ರಾಘವೇಂದ್ರ, ಸಿಂದ್ವಾಳ್ ಮಹೇಶಗೌಡ, ಸಿ.ಎಂ. ಗಂಗಾಧರಯ್ಯ ಹೊಸಪೇಟೆಯ ಕುಡುತಿನಿ ಮಹೇಶ್, ಕುಮಾರ್ ಜಾಲಿಹಾಳ ಶ್ರೀಧರಗೌಡ, ಶಿವಶಂಕರಗೌಡ ಬಿಸಿಲಹಳ್ಳಿ, ಎಸ್. ಪ್ರಸಾದ್, ಬಸವರಾಜ್, ವಿ. ಕೃಷ್ಣ, ನಾಗೇಂದ್ರ, ಕಣ್ಣಿ ಶರಣಬಸಪ್ಪ, ಕೃಷ್ಣ ದರೋಜಿ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್