
ಗದಗ, 20 ಜನವರಿ (ಹಿ.ಸ.) :
ಆ್ಯಂಕರ್ : ಗದಗ ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮತ್ತೊಂದು ಅಚ್ಚರಿ ಮೂಡಿಸುವ ಪತ್ತೆ ನಡೆದಿದೆ. ಹೊರಗಿನಿಂದ ನೋಡಿದರೆ ಸಾಮಾನ್ಯ ಮನೆ, ಆದರೆ ಮನೆಯೊಳಗೆ ಪ್ರವೇಶಿಸಿದರೆ ಚಾಲುಕ್ಯರ ಕಾಲದ ಪುರಾತನ ದೇವಸ್ಥಾನ ಹುದುಗಿರುವುದು ಪತ್ತೆಯಾಗಿದೆ.
ಲಕ್ಕುಂಡಿ ಗ್ರಾಮದ ಚೌಕಿಮಠ ಮನೆಯ ಸಂಕೀರ್ಣದಲ್ಲಿ ಈಶ್ವರ ಹಾಗೂ ಅರ್ಧನಾರೇಶ್ವರ ದೇವಸ್ಥಾನಗಳು ಮನೆಗಳ ನಡುವೆ ಮುಚ್ಚಿಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇತಿಹಾಸಕಾರರ ಪ್ರಕಾರ, ಇದು ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನವಾಗಿದ್ದು, ಕಾಲಕ್ರಮೇಣ ಮನೆ ನಿರ್ಮಾಣದಿಂದ ಸುಮಾರು ಹತ್ತು ಅಡಿ ಆಳಕ್ಕೆ ಮುಚ್ಚಿಹೋಗಿದೆ.
ಸರ್ಕಾರದ ಕಣ್ಣು ಜೀರ್ಣೋದ್ಧಾರಕ್ಕೆ ಯೋಜನೆ
ಮನೆಯೊಳಗೆ ಹುದುಗಿರುವ ಈ ಐತಿಹಾಸಿಕ ದೇವಸ್ಥಾನದ ಮೇಲೆ ಇದೀಗ ಸರ್ಕಾರದ ಕಣ್ಣು ಬಿದ್ದಿದೆ. ದೇವಸ್ಥಾನವನ್ನು ವಶಕ್ಕೆ ಪಡೆದು, ಜೀರ್ಣೋದ್ಧಾರ ಮಾಡಿ ಪುರಾತತ್ವ ಸ್ಮಾರಕವಾಗಿ ಅಭಿವೃದ್ಧಿಪಡಿಸುವ ಕುರಿತು ಚರ್ಚೆಗಳು ಆರಂಭವಾಗಿವೆ.
ಸ್ಥಳೀಯ ಕುಟುಂಬಗಳ ಸ್ಪಷ್ಟ ನಿಲುವು
ಚೌಕಿಮಠ ಕುಟುಂಬದ ಶೇಖರಯ್ಯ ಚೌಕಿಮಠ ಮಾತನಾಡಿ, “ಈ ಆವರಣದಲ್ಲಿ ಶರಣಯ್ಯ ಚೌಕಿಮಠ, ಶೇಖರಯ್ಯ ಚೌಕಿಮಠ, ಬಸವ್ವ ಈರಯ್ಯ ಚೌಕಿಮಠ, ಕೊಟ್ರಯ್ಯ ಚೌಕಿಮಠ, ಈರಮ್ಮ ಶಂಕ್ರಯ್ಯ ಚೌಕಿಮಠ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ವಾಸಿಸುವವರೆಲ್ಲ ಬಡ ಕುಟುಂಬಗಳೇ. ಸರ್ಕಾರ ಸೂಕ್ತ ಪರಿಹಾರ ನೀಡಿದರೆ, ದೇವಸ್ಥಾನ ವಶಕ್ಕೆ ನೀಡಲು ನಾವು ಸಿದ್ಧ” ಎಂದು ತಿಳಿಸಿದ್ದಾರೆ.
ಇತಿಹಾಸದ ಮತ್ತೊಂದು ಅಧ್ಯಾಯ
101 ದೇವಸ್ಥಾನಗಳು, 101 ಬಾವಿಗಳಿಂದ ಖ್ಯಾತಿ ಪಡೆದ ಲಕ್ಕುಂಡಿಯಲ್ಲಿ, ಮನೆಯೊಳಗೇ ದೇವಸ್ಥಾನ ಹುದುಗಿರುವ ಈ ಪತ್ತೆ ಮತ್ತೊಮ್ಮೆ ಗ್ರಾಮದ ಪುರಾತನ ವೈಭವವನ್ನು ಸಾಬೀತುಪಡಿಸಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳತ್ತ ಇದೀಗ ಇತಿಹಾಸಾಸಕ್ತರ ಹಾಗೂ ಗ್ರಾಮಸ್ಥರ ಗಮನ ನೆಟ್ಟಿದೆ.
ಹಿಂದೂಸ್ತಾನ್ ಸಮಾಚಾರ್ / lalita MP