
ವಿಜಯಪುರ, 19 ಜನವರಿ (ಹಿ.ಸ.) :
ಆ್ಯಂಕರ್ : ಅನೇಕ ದಾರ್ಶನಿಕರ ವಿಚಾರಧಾರೆಗಳನ್ನು ಹಾಗೂ ಆ ಮಹನೀಯರು ಸಾರಿದ ತತ್ವಗಳ ತಿರುಳು ಅರಿತುಕೊಳ್ಳಬೇಕು. ಇವರು ಸಾರಿದ ಸಂದೇಶ ಹಾಗೂ ಚಿಂತನೆಗಳನ್ನು
ಅರಿಯುವ ಮೂಲಕ ಅವರ ವಿಚಾರಧಾರೆಗಳನ್ನು ಎಲ್ಲರಿಗೂ ತಿಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾಯೋಗಿಯ ಜೀವನ ಸಂದೇಶ ಎಲ್ಲರಿಗೂ ಪ್ರೇರಣೆಯಾಗಲಿ, ಮಹನೀಯರ ಸಾರಿದ ತತ್ವ ಸಿದ್ದಾಂತಗಳನ್ನು ಅರ್ಥ ಮಾಡಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು. ಎಲ್ಲರೂ ಸಮಾನರು ಎಂದು ಸಾರಿದ ವೇಮನರ ಬದುಕು ಹಾಗೂ ಹಾಗೂ ಅವರ ಸಾಹಿತ್ಯಕ ಚಿಂತನೆಯ ಸಾರ ಸ್ಪೂರ್ತಿಯಾಗಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಆ ನಿಟ್ಟಿನಲ್ಲಿ ನಾವೆಲ್ಲ ಸಾಗಬೇಕು ಎಂದರು.
ಸಮಾಜದಲ್ಲಿ ಕವಿದಿದ್ದ ಅಂಧಕಾರ ತೊಡೆದು ಹಾಕಲು ಜ್ಞಾನದ ದೀವಿಗೆ ಹಿಡಿದು ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸಮಾಜ ಸುಧಾರಣೆಗೆ ಅವಿರತ ಶ್ರಮಿಸಿದ ಸಮಾಜ ಸುಧಾರಕರಾದ ಮಹಾಯೋಗಿ ವೇಮನರ ವಚನಗಳು ನಮಗೆ ದಾರಿ ದೀಪವಾಗಿವೆ ಎಂದರು.
ಇವರೋರ್ವ ತತ್ವಜ್ಞಾನಿಯೂ ಕೂಡ,ಸಮಾಜ ಸುಧಾರಣೆ ಹಾಗೂ ತತ್ವ ಹಾಗೂ ನೀತಿ ಬೋಧನೆಗಳ ಕುರಿತ ಸಾಕಷ್ಟು ಪದ್ಯ ರಚಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾಯೋಗಿ ವೇಮನ ಜೀವನ ಚರಿತ್ರೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಬಿ.ಎನ್.ಪಾಟೀಲ ಅವರು ಮಹಾಯೋಗಿ ವೇಮನರು ಜಾತಿಯತೆ, ಅಂಧಶ್ರದ್ಧೆ, ಮೇಲು-ಕೀಳುಗಳನ್ನು ಹೋಗಲಾಡಿಸಲು ಕಾವ್ಯದ ಮೂಲಕ ಜನರಿಗೆ ತಿಳುವಳಿಕೆ ನೀಡಿದರು ಎಂದರು.
ಇವರು ಹಲವಾರು ಚೌಪದಿ ಹಾಗೂ ವಚನಗಳನ್ನು ರಚಿಸಿದ್ದಾರೆ.
ಮಹಾಯೋಗಿ ವೇಮನರ ಚಿಂತನೆ ಎಲ್ಲಾ ಕಾಲಕ್ಕೂ ಪ್ರಸ್ತುತ. ವೇಮನರ ಕಾವ್ಯ ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದು, ಬಸವಾದಿ ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವೇಮನ ಜಯಂತಿ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ,ಸುರೇಶ ದೇಸಾಯಿ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ,ಸಿಬ್ಬಂದಿ ಸೇರಿದಂತೆ ಸಮಾಜದ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande