
ವಿಜಯಪುರ, 19 ಜನವರಿ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಇಲ್ಲಿವರೆಗೆ ದ್ರಾಕ್ಷಿ ವಿಮೆ ಹಣ ಬಿಡುಗಡೆ ಯಾಗದೆ ಇರುವುದರಿಂದ ರೈತರ ಆಕ್ರೋಶ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ನಗರದ ಲ್ಲಿರುವ ತೋಟಗಾರಿಕಾ ಇಲಾಖೆ ಕಚೇರಿ ಎದುರು ಸುಮಾರು 50ಕ್ಕೂ ಹೆಚ್ಚು ರೈತರು ಸೇರಿ ಪ್ರತಿಭಟನೆ ನಡೆಸಿದರು.
ಕಳೆದ ಹಂಗಾಮಿನಲ್ಲಿ ದ್ರಾಕ್ಷಿ ಬೆಳೆಗಳಿಗೆ ಹವಾಮಾನ ವೈಪರೀತ್ಯ, ರೋಗಬಾಧೆಗಳಿಂದ ಭಾರಿ ನಷ್ಟ ಉಂಟಾಗಿದ್ದು, ವಿಮೆ ಮೊತ್ತ ಬರಲಿದೆ ಎಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ ತಿಂಗಳುಗಳಾದರೂ ವಿಮೆ ಹಣ ಜಮೆಯಾಗದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು, ತಕ್ಷಣ ವಿಮೆ ಹಣ ಬಿಡುಗಡೆ ಮಾಡಬೇಕು, ವಿಳಂಬಕ್ಕೆ ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೊತೆಗೆ, ಮುಂದಿನ ದಿನಗಳಲ್ಲಿ ಇಂತಹ ವಿಳಂಬ ಮರುಕಳಿಸದಂತೆ ಸ್ಪಷ್ಟ ವೇಳಾಪಟ್ಟಿ ಪ್ರಕಟಿಸಬೇಕೆಂದು ಮನವಿ ಮಾಡಿದರು.
ರೈತರ ಸಮಸ್ಯೆಗೆ ತ್ವರಿತ ಪರಿಹಾರ ಸಿಗದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಸಿರು ಸೇನೆ ಅಧ್ಯಕ್ಷ ಸಂಗಮೇಶ ಸಗರ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande