ಪುರಾತನ ಕೊಡಲಿ ಗಂಟೆ ಪತ್ತೆ ; ಸ್ವಯಂಘೋಷಿತ ಸ್ವಾಮೀಜಿ ನಾಟಕೀಯ ಘಟನೆ
ಹಾಕಿ
ಫೋಟೋ


ಗದಗ, 19 ಜನವರಿ (ಹಿ.ಸ.) :

ಆ್ಯಂಕರ್ : ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಚಿನ್ನದ ನಿಧಿ ಪತ್ತೆಯಾದ ಸುದ್ದಿಯ ಬೆನ್ನಲ್ಲೇ ಆರಂಭಗೊಂಡಿರುವ ಉತ್ಖನನ ಕಾರ್ಯ ನಾಲ್ಕನೇ ದಿನವೂ ಮುಂದುವರಿದಿದ್ದು, ಶಿಲಾಯುಗ ಕಾಲಕ್ಕೆ ಸೇರಿದ ಆಯುಧ, ಲೋಹದ ಗಂಟೆ ಸೇರಿದಂತೆ ಹಲವು ಪುರಾತನ ಅವಶೇಷಗಳು ಪತ್ತೆಯಾಗಿವೆ.

ಗದಗ ತಾಲ್ಲೂಕಿನ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಉತ್ಖನನ ವೇಳೆ ಶಿಲಾಯುಗದಲ್ಲಿ ಬಳಸಲಾಗುತ್ತಿದ್ದ ಕೊಡಲಿ ಆಕಾರದ ಅಂಡಾಕಾರದ ಕಲ್ಲಿನ ಆಯುಧ ಪತ್ತೆಯಾಗಿದ್ದು, ಅದರ ಮುಂಭಾಗ ಮೊನಚಾಗಿರುವುದು ಗಮನ ಸೆಳೆದಿದೆ. ಪುರಾತತ್ವ ಇಲಾಖೆಯ ಮೇಲ್ವಿಚಾರಕರು ತಕ್ಷಣವೇ ಆಯುಧವನ್ನು ವಶಕ್ಕೆ ಪಡೆದು, ಟ್ಯಾಗ್ ಅಳವಡಿಸಿ ಸಂರಕ್ಷಣೆ ಮಾಡಿದ್ದಾರೆ.

ಲೋಹದಿಂದ ನಿರ್ಮಿತವಾದ ಪುರಾತನ ಗಂಟೆಯೊಂದು ಉತ್ಖನನ ಸ್ಥಳದಲ್ಲಿ ಪತ್ತೆಯಾಗಿದ್ದು, ಇಲಾಖೆಯ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಅದನ್ನು ವಶಕ್ಕೆ ಪಡೆದಿದ್ದಾರೆ. ಶಿವಲಿಂಗದ ಪಾನಿ ಪೀಠ, ನಾಗರ ಮೂರ್ತಿಯ ಅವಶೇಷಗಳು ಕೂಡಾ ಈ ಮೊದಲು ಪತ್ತೆಯಾಗಿದ್ದವು.

ಕಾರ್ಮಿಕರ ಕೂಲಿ ವಿವಾದ

ಉತ್ಖನನ ಕಾರ್ಯ ಬೆಳಿಗ್ಗೆ 8 ಗಂಟೆಗೆ ಆರಂಭವಾಗಬೇಕಿದ್ದರೂ, ಕಾರ್ಮಿಕರ ಕೂಲಿ ವಿಚಾರದಲ್ಲಿ ಉಂಟಾದ ಅಸಮಾಧಾನದ ಹಿನ್ನೆಲೆಯಲ್ಲಿ ಸುಮಾರು 45 ನಿಮಿಷ ತಡವಾಗಿ ಆರಂಭವಾಯಿತು. ದಿನಕ್ಕೆ 10 ಗಂಟೆಗಳವರೆಗೆ ಬಿಸಿಲಿನಲ್ಲಿ ಕೆಲಸ ಮಾಡಬೇಕಾಗುತ್ತಿದ್ದು, ಕೇವಲ 374 ರೂ. ವೇತನ ನೀಡಲಾಗುತ್ತಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಇತರ ಕೂಲಿ ಕೆಲಸಗಳಿಗೆ ಹೋಲಿಸಿದರೆ ಇದು ಕಡಿಮೆ ವೇತನವಾಗಿದ್ದು, ದಿನಕ್ಕೆ ಕನಿಷ್ಠ 600 ರೂ. ನೀಡಬೇಕು ಎಂದು ಅವರು ಆಗ್ರಹಿಸಿದರು.

ಸ್ವಯಂಘೋಷಿತ ಸ್ವಾಮೀಜಿಯ ನಾಟಕೀಯ ಘಟನೆ

ಉತ್ಖನನ ನಡೆಯುತ್ತಿದ್ದ ಸ್ಥಳಕ್ಕೆ ಸ್ವಯಂಘೋಷಿತ ಸ್ವಾಮೀಜಿಯೊಬ್ಬರು ಆಗಮಿಸಿ, “ನಾನು ನಿಂತ ಜಾಗದಲ್ಲಿ ಸಾವಿರ ಕೆಜಿ ಚಿನ್ನದ ಚಾಮುಂಡಿ ಮೂರ್ತಿ ಹಾಗೂ ಕಿರೀಟ ಇದೆ” ಎಂದು ಹೇಳಿ ಜನರನ್ನು ನಂಬಿಸಲು ಯತ್ನಿಸಿದರು. ಕೈಯಲ್ಲಿ ಗಜಲಿಂಬೆ ಹಿಡಿದುಕೊಂಡು ನಡೆಸಿದ ಈ ನಾಟಕೀಯ ಘಟನೆ ಸ್ಥಳದಲ್ಲಿ ಗೊಂದಲ ಉಂಟಾಯಿತು.

ಮೊದಲಿಗೆ ಕುತೂಹಲಗೊಂಡ ಗ್ರಾಮಸ್ಥರು, ನಂತರ ಸ್ವಾಮೀಜಿಯ ಹೇಳಿಕೆಗಳು ಸುಳ್ಳು ಎಂಬುದು ತಿಳಿದ ಬಳಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಕಳ್ಳ ಸ್ವಾಮಿ’, ‘ಸುಳ್ಳು ಸ್ವಾಮಿ’ ಎಂದು ಘೋಷಣೆ ಹಾಕಿ, ಸ್ವಾಮೀಜಿಯನ್ನು ಉತ್ಖನನ ಸ್ಥಳದಿಂದ ಮುಖ್ಯರಸ್ತೆಯವರೆಗೆ ಹಿಂಬದಿ ನಡಿಗೆ ಮೂಲಕ ಹೊರಹಾಕಿದರು.

ಸಿದ್ದರಬಾವಿ ಅವ್ಯವಸ್ಥೆ ಬಗ್ಗೆ ಆಕ್ಷೇಪ

ಇದೇ ವೇಳೆ ಉತ್ಖನನ ನಡೆಯುತ್ತಿರುವ ಸಿದ್ದರಬಾವಿ ಪ್ರದೇಶದಲ್ಲಿ ಸಾಕಷ್ಟು ಅವ್ಯವಸ್ಥೆ ಇದ್ದು, ತಕ್ಷಣ ಸ್ವಚ್ಛತೆ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಐತಿಹಾಸಿಕ ಲಕ್ಕುಂಡಿಯ ಉತ್ಖನನ ಕಾರ್ಯದಲ್ಲಿ ಮುಂದಿನ ದಿನಗಳಲ್ಲಿ ಇನ್ನೇನು ಪುರಾತನ ಅವಶೇಷಗಳು ಪತ್ತೆಯಾಗಲಿವೆ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಕಾತರತೆ ಹೆಚ್ಚಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande