
ಕಾಸರಗೋಡು, 19 ಜನವರಿ (ಹಿ.ಸ.) :
ಆ್ಯಂಕರ್ : ಅಲೋಪತಿ ಹಾಗೂ ಆಯುರ್ವೇದ ಉಭಯ ಚಿಕಿತ್ಸಾ ಮಾರ್ಗಗಳ ನಡುವೆ ಯಾವಾಗಲೂ ತರ್ಕ, ಸಂಘರ್ಷ, ದಂದ್ವಗಳು ಇವೆ. ಆದರೆ ಇವೆರಡರ ಸಂಯೋಜಿತ ಚಿಕಿತ್ಸಾ ಕ್ರಮದಿಂದ ಆನೆಕಾಲು ರೋಗಕ್ಕೆ ಪರಿಣಾಮಕಾರಿ ಪರಿಹಾರ ಮಾರ್ಗವನ್ನು ಕಂಡುಕೊಳ್ಳುವಲ್ಲಿ ಕಾಸರಗೋಡಿನ ಡಾ.ನರಹರಿ ಮತ್ತು ಡಾ.ಪ್ರಸನ್ನ ಅವರ ತಂಡ ಹೊಸ ಭರವಸೆಯ ಹಾದಿ ರೂಪಿಸಿದೆ ಎಂದು ಇಂಗ್ಲೆಂಡ್ ನಾಟಿಂಗ್ ಹ್ಯಾಂ ವಿಶ್ವವಿದ್ಯಾಲಯದ ಯಕೃತ್ತು ರೋಗಗಳ ವಿಭಾಗದ ತಜ್ಞ ಡಾ.ಗುರುಪ್ರಸಾದ ಐತಾಳ್ ಹೇಳಿದರು.
ಡಾ.ಯು. ಮಹೇಶ್ವರಿ ಅವರ 'ಆನೆಕಾಲಿಗೆ ಅಂಕುಶ ಸಂಯೋಜಿತ ಚಿಕಿತ್ಸೆಯ ಹರಿಕಾರ ಡಾ.ನರಹರಿ ಮತ್ತು ಐಎಡಿ' ಕೃತಿಯ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಾಸರಗೋಡು ಐಎಂಎ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಭಾರತದಲ್ಲಿ ಸರಕಾರಿ ಆರೋಗ್ಯ ಸೇವೆ ಎನ್ನುವುದು ತುಂಬಾ ಕಡಿಮೆ ಇದೆ. ಸಾಕಷ್ಟು ಸೌಕಭ್ಯಗಳು ಸರಕಾರಿ ವ್ಯವಸ್ಥೆಯಲ್ಲಿ ಇಲ್ಲ. ಖಾಸಗಿ ವೈದ್ಯಕೀಯ ಸೇವೆ ವ್ಯವಹಾರವಾಗಿದೆ. ಉದ್ಯಮೀಕರಣವಾಗಿದೆ. ಇಂತಹ ಸಂದರ್ಭಗಳಲ್ಲಿ ಇನ್ಸ್ಟಿಟ್ಯೂಟ್ ಆಫ್ ಎಪ್ಲೈಡ್ ಡರ್ಮಟಾಲಜಿ (ಐಎಡಿ)ಅಂತಹ ಸಂಸ್ಥೆಗಳು ಸಮುದಾಯ ನಿಷ್ಠವಾಗಿ ಮೂರನೇ ಮಾರ್ಗವೊಂದನ್ನು ಕಂಡುಕೊಂಡಿದೆ ಎಂದು ಅವರು ವಿಶ್ಲೇಷಿಸಿದರು.
ಐಎಡಿಯ ಆರೈಕೆಯ ಮಾರ್ಗದಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಊದಿದ ಕಾಲುಗಳ ಗಾತ್ರ ಅರ್ಧ ಭಾಗ ಕುಗ್ಗಿದೆ. ಉರಿಯೂತಗಳ ಸಂಖ್ಯೆ ಶೇ . 90 ಇಳಿದಿದೆ. ಆಂಟಿ ಬಯೋಟಿಕ್ ಔಷಧ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಿದೆ. ಕಾಸರಗೋಡಿನ ತಂಡದ ಪ್ರಯೋಗದಿಂದ ದೇಶದಾದ್ಯಂತ ಸಾವಿರಾರು ಜನರ ಬದುಕು ಹಗುರಾಗಿದೆ. ನೂತನ ಕೃತಿಯು ಕನ್ನಡದ ಬಂಡವಾಳ ಹಿಗ್ಗಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸೃಜನಶೀಲ ಸಾಹಿತ್ಯದಲ್ಲಿ ವಿಜ್ಞಾನವನ್ನು ಮೊದಲು ತಂದವರು ಪೂರ್ಣಚಂದ್ರ ತೇಜಸ್ವಿಯವರು. ಅವರ ಕರ್ವಾಲೋ ಕಾದಂಬರಿ ವಿಕಾಸವಾದವನ್ನು ವಿವರಿಸಲು ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಡಾ.ಶ್ರೀಪತಿ ಕಜಂಪಾಡಿ, ಕವಿ ರಾಧಾಕೃಷ್ಣ ಉಳಿಯತ್ತಡ್ಕ, ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ, ಕತೆಗಾರರಾದ ಸ್ನೇಹಲತಾ ದಿವಾಕರ ಸಂವಾದದಲ್ಲಿ ಭಾಗವಹಿಸಿದರು.
ಡಾ.ರಾಧಾಕೃಷ್ಣ ಬೆಳ್ಳೂರು ಕಾರ್ಯಕ್ರಮ ನಿರ್ವಹಿಸಿದರು. ವಿಶಾಲಾಕ್ಷ ಪುತ್ರಕ್ಕಳ ಸ್ವಾಗತಿಸಿದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ