
ನವದೆಹಲಿ, 15 ಜನವರಿ (ಹಿ.ಸ.) :
ಆ್ಯಂಕರ್ : ಸೇನಾ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರು, ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರತಿ ಪಕ್ಷದ ನಾಯಕರು ಭಾರತೀಯ ಸೇನೆಯ ಅದಮ್ಯ ಧೈರ್ಯ, ಶೌರ್ಯ ಮತ್ತು ಸಮರ್ಪಣೆಗೆ ಗೌರವ ಸಲ್ಲಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸನಲ್ಲಿ ಸಂದೇಶ ಹಂಚಿಕೊಂಡು, ಭಾರತೀಯ ಸೇನೆಯು ರಾಷ್ಟ್ರದ ಏಕತೆ, ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ರಕ್ಷಿಸುವಲ್ಲಿ ದೃಢನಿಶ್ಚಯದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಗಡಿಗಳ ರಕ್ಷಣೆಯ ಜೊತೆಗೆ ವಿಪತ್ತುಗಳು ಹಾಗೂ ಮಾನವೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿ ಸೇನೆ ವಹಿಸುವ ಪಾತ್ರ ಅಮೂಲ್ಯವಾಗಿದೆ. ಸೈನಿಕರ “ರಾಷ್ಟ್ರ ಮೊದಲು” ಎಂಬ ಅಚಲ ಮನೋಭಾವವು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದರು.
ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಅವರು, ದೇಶದ ಜಾಗರೂಕ ಕಾವಲುಗಾರರಾದ ಭಾರತೀಯ ಸೇನೆಯ ಧೀರ ಸೈನಿಕರಿಗೆ ನಮನ ಸಲ್ಲಿಸಿ, ಆಂತರಿಕ ಮತ್ತು ಬಾಹ್ಯ ಭದ್ರತೆಯನ್ನು ಖಚಿತಪಡಿಸುವುದರ ಜೊತೆಗೆ ಪ್ರತಿಯೊಂದು ಸಂಕಷ್ಟದ ಘಳಿಗೆಯಲ್ಲೂ ಸೇನೆ ನಾಗರಿಕರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದರು. ಸೇವೆ, ಸಮರ್ಪಣೆ ಮತ್ತು ಕರ್ತವ್ಯದ ಮೇಲಿನ ಭಕ್ತಿ ಸೇನೆಯ ವಿಶೇಷ ಲಕ್ಷಣಗಳಾಗಿವೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೈನಿಕರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳನ್ನು ಸಲ್ಲಿಸಿ, ಭಾರತೀಯ ಸೇನೆಯ ಶೌರ್ಯ ಇತಿಹಾಸದ ಪುಟಗಳಲ್ಲಿ ಅಮರವಾಗಿದೆ ಎಂದು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ವೃತ್ತಿಪರತೆ, ಶಿಸ್ತು ಮತ್ತು ಮಾನವೀಯ ಸೇವೆಯಿಂದ ಭಾರತೀಯ ಸೇನೆ ಜಾಗತಿಕ ಗೌರವವನ್ನು ಗಳಿಸಿದೆ ಎಂದು ಹೇಳಿ, ಆಧುನಿಕ ಹಾಗೂ ಸ್ವಾವಲಂಬಿ ಸೇನೆ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಭಾರತೀಯ ಸೇನೆ ದೇಶದ ದೃಢ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಲೋಕ ಸಭೆ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa