ಬಳ್ಳಾರಿ, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸೆ.13 ರಂದು ಈ ವರ್ಷದ ಮೂರನೇ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, ಸಾರ್ವಜನಿಕರು ಬಾಕಿ ಇರುವ ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಮೋದ್ ಬಿ.ಜಿ ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ನಗರದ ತಾಳೂರು ರಸ್ತೆಯ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮೂರನೇ ಮಹಡಿಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಉಭಯ ಕಕ್ಷಿದಾರರ ಪರಸ್ಪರ ಹೊಂದಾಣಿಕೆಗಾಗಿ ಮತ್ತು ತ್ವರಿತ ನ್ಯಾಯಕ್ಕಾಗಿ ರಾಷ್ಟ್ರೀಯ ಲೋಕ್ ಅದಾಲತ್ ಸಹಕಾರಿ. ಅಖಂಡ (ಬಳ್ಳಾರಿ ಮತ್ತು ವಿಜಯನಗರ) ಜಿಲ್ಲೆಯ 31 ನ್ಯಾಯಾಲಯಗಳಲ್ಲಿ ಅಂದು ಬಗೆಹರಿಸಬಹುದಾದ ವಿವಿಧ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಹಾಗೂ ನ್ಯಾಯಾಲಯದ ಶುಲ್ಕವನ್ನು ಮರು ಪಾವತಿಸಲಾಗುತ್ತದೆ ಎಂದರು.
ವೈವಾಹಿಕ, ಕೌಟುಂಬಿಕ, ಮೋಟಾರು ಅಪಘಾತ, ಚೆಕ್ ಅಮಾನ್ಯದ, ವಾಣಿಜ್ಯ, ಸೇವಾ ಪ್ರಕರಣಗಳು ಮತ್ತು ರಾಜೀಯಾಗಬಲ್ಲ, ಗ್ರಾಹಕ ವ್ಯಾಜ್ಯ, ಡಿಆರ್ ಟಿ, ಪಾಲುದಾರಿಕೆ, ಸಾರಿಗೆ ಹಾಗೂ ಇತರೇ ಸಿವಿಲ್ ಪ್ರಕರಣಗಳು ಸೇರಿದಂತೆ ಎಲ್ಲಾ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಲಯದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್