ಕೊಪ್ಪಳ, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕನಕಗಿರಿ, ಕಾರಟಗಿ ಮತ್ತು ಗಂಗಾವತಿ ತಾಲ್ಲೂಕಿನಲ್ಲಿ ರೈತರಿಗೆ ಕೆಲ ಮಧ್ಯವರ್ತಿಗಳು ತೋಟಗಾರಿಕೆ ಇಲಾಖೆಯ ಹಾಗೂ ಕೆಲವೊಂದು ಕಂಪನಿಗಳ ಹೆಸರು ಹೇಳಿಕೊಂಡು ಪಿಎಂಕೆಎಸ್‌ವೈ ಯೋಜನೆಯಡಿ ಹನಿ ನೀರಾವರಿ ಸಲಕರಣೆಗಳನ್ನು ಕೊಡಿಸುವುದಾಗಿ ತಮಗೆ ತಿಳಿದಂತೆ ಸುಳ್ಳು ಹೇಳಿ ರೈತರಿಂದ ಹಣ ವಸೂಲಿ ಮಾಡಿ ರೈತರಿಗೆ ಮೋಸ ಮಾಡುತ್ತಿರುವುದು ತಿಳಿದು ಬಂದಿರುತ್ತದೆ.
ಆದ್ದರಿಂದ ರೈತರು ಮಧ್ಯವರ್ತಿಗಳಿಂದ ಮೋಸ ಹೋಗದೆ, ನೇರವಾಗಿ ತೋಟಗಾರಿಕೆ ಇಲಾಖೆ ಗಂಗಾವತಿ ಕಛೇರಿ ಅಥವಾ ಸಂಬಂಧಿಸಿದ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಭೇಟಿ ಮಾಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ತೋಟಗಾರಿಕೆ ಇಲಾಖೆಯಿಂದ ರೈತರಿಗೆ ತೋಟಗಾರಿಕೆ ಬೆಳೆಗಳಿಗೆ ಪಿಎಂಕೆಎಸ್‌ವೈ ಯೋಜನೆಯಡಿ ತಮ್ಮ ಹೊಲದಲ್ಲಿ ಹನಿ ನೀರಾವರಿ ಅಳವಡಿಸಿಕೊಂಡು ಸಹಾಯಧನ ಪಡೆಯಲು ಅವಕಾಶವಿರುತ್ತದೆ.
ರೈತರು ಯಾವುದೇ ಮಧ್ಯವರ್ತಿಗಳ ಬಳಿ ತೆರಳದೇ ನೇರವಾಗಿ ತೋಟಗಾರಿಕೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ, ಸರ್ಕಾರದಿಂದ ಅಧಿಕೃತವಾಗಿ ಅನುಮೋದನೆಗೊಂಡ ತಮ್ಮ ಇಚ್ಛೆಯ ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ತಾವು ಬೆಳೆಯುವ ತೋಟಗಾರಿಕೆ ಬೆಳೆಗಳಾದ ತರಕಾರಿ, ಹಣ್ಣು, ಹೂವು ಹಾಗೂ ಇತರೆ ತೋಟಗಾರಿಕೆ ಬೆಳೆಗಳಿಗೆ ಬೆಳೆಯುವ ವಿಸ್ತೀರ್ಣ ಹಾಗೂ ಬೆಳೆಗಳ ಅಂತರ ತಿಳಿಸಿ ಬೆಳೆಗೆ ಸಂಬಂಧಿಸಿದ ಹನಿ ನೀರಾವರಿ ಘಟಕದ ವೆಚ್ಚ ಹಾಗೂ ವಂತಿಕೆಯನ್ನು ಪಾವತಿಸುವ ಬಗ್ಗೆ ಅಳವಡಿಸುವ ಕಂಪನಿಯಿಂದ ಕೊಟೇಷನ್ ಪಡೆದು ದಾಖಲಾತಿಗಳನ್ನು ಕಂಪನಿಗೆ ಸಲ್ಲಿಸಿ, ನಂತರ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಯೋಜನೆಯ ಸದುಪಯೋಗ ಪಡಸಿಕೊಳ್ಳಬೇಕು.
ಯಾವುದೇ ಮಧ್ಯವರ್ತಿಗಳು ಮೋಸ ಮಾಡುವುದು ಕಂಡು ಬಂದಲ್ಲಿ ನೇರವಾಗಿ ತೋಟಗಾರಿಕೆ ಇಲಾಖೆಗೆ ತಿಳಿಸಬೇಕು ಎಂದು ಗಂಗಾವತಿ, ಕನಕಗಿರಿ ಮತ್ತು ಕಾರಟಗಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್