ಸಮಾಜದಲ್ಲಿ ಗೌರವ ಸ್ಥಾನ ಹೊಂದಿರುವ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ರಮೇಶ ಜಿಗಜಿಣಗಿ
ವಿಜಯಪುರ, 05 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ಸಮಾಜದಲ್ಲಿ ಮಹತ್ವದ್ದಾಗಿದ್ದು, ಶಿಕ್ಷಕರಿಗೆ ಸಮಾಜದಲ್ಲಿ ಬಹಳ ಗೌರವದ ಸ್ಥಾನವಿದ್ದು, ಶಿಕ್ಷಕರು ನಿರ್ವಹಿಸುವ ಕಾರ್ಯ ಅನನ್ಯವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ನಗರದ ಕಂದಗಲ್ ಶ್ರೀ ಹನುಮಂತರಾಯ
ಶಿಕ್ಷಕರು


ವಿಜಯಪುರ, 05 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ಸಮಾಜದಲ್ಲಿ ಮಹತ್ವದ್ದಾಗಿದ್ದು, ಶಿಕ್ಷಕರಿಗೆ ಸಮಾಜದಲ್ಲಿ ಬಹಳ ಗೌರವದ ಸ್ಥಾನವಿದ್ದು, ಶಿಕ್ಷಕರು ನಿರ್ವಹಿಸುವ ಕಾರ್ಯ ಅನನ್ಯವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಾರ್ಯಾಲಯ ಹಾಗೂ ನಗರ ವಲಯ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿ ಪಾಠ ಬೊಧನೆ ಮಾಡುವ ಮೂಲಕ ಮುಂದಿನ ಉತ್ತಮ ನಾಗರಿಕರನ್ನಾಗಿ ರೂಪಿಸುವ ಬಹು ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಕಲ್ಲಿನ ಮೂರ್ತಿಯನ್ನು ಶಿಲೆಯನ್ನಾಗಿಸುವಂತೆ ಅಮೂರ್ತ ರೂಪದ ಮಕ್ಕಳನ್ನು ಮೂರ್ತರೂಪ ಕೊಡುವ ಮಕ್ಕಳ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳ ಅಂತರಾಳವನ್ನು ಅರಿತು, ಪರಿಣಾಮಕಾರಿಯಾಗಿ ಬೋಧನೆ ಮಾಡುವ ಮೂಲಕ ಮಕ್ಕಳು ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳುವ ಜವಾಬ್ದಾರಿ ನಿಭಾಯಿಸುವ ಶಿಕ್ಷಕರ ಸ್ಥಾನ ಗೌರವಕ್ಕೆ ಭಾಜನವಾಗಿದ್ದು, ಶಿಕ್ಷಕ ಓರ್ವ ವ್ಯಕ್ತಿ ಅಲ್ಲ ಅದೊಂದು ಶಕ್ತಿಯಾಗಿದ್ದು, ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ನಾಗಠಾಣ ಶಾಸಕ ವಿಠಲ ಕಟಕಧೋಂಡ ಅವರು, ಮಾತನಾಡಿ, ಜ್ಞಾನದ ದೀವಿಗೆ ಬೆಳಗುವ ಶಿಕ್ಷಕ ಜ್ಞಾನಯೋಗಿ, ದಾರ್ಶನಿಕ, ಶಿಕ್ಷಕ, ಲೇಖಕ ಮತ್ತು ರಾಜಕಾರಣಿಯಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ನೀಡಿದ ಕೊಡುಗೆ ಅಪಾರವಾಗಿದೆ. ವ್ಯಕ್ತಿಯ ಜೀವನ ಹಾಗೂ ಭವ್ಯ ಭವಿತವ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದ್ದು, ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿಷ್ಠೆಯ ಪರಿಪಾಲನೆಯೊಂದಿಗೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಪಾಠ ಬೋಧನೆ ಮಾಡಿ, ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು. ತಂದೆ ತಾಯಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ, ಶಿಕ್ಷಕ ಶಿಕ್ಷಣದ ಮೂಲಕ ನೀರೆರೆದು ಪೋಷಿಸಿ ಅವರ ಸರ್ವಾಂಗೀಣ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಶ್ರಮಿಸುವ ಸಾಕಾರಮೂರ್ತಿಯಾಗಿದ್ದಾರೆ ಎಂದರು.

ನೈತಿಕ ಮೌಲ್ಯಗಳನ್ನು ತಿಳಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಈ ಸಮಾಜದ ರಕ್ಷಣೆ ಮಾಡುವ ಕಾರ್ಯ ನಿರ್ವಹಿಸುವ ಶಿಕ್ಷಕರದ್ದು ಅನುಪಮ ಕಾರ್ಯವಾಗಿದೆ. ಸದೃಢ ಹಾಗೂ ಸಶಕ್ತ ರಾಷ್ಟç ನಿರ್ಮಾಣದಲ್ಲಿ ಶಿಕ್ಷಕರ ಕಾರ್ಯ ಮಹತ್ವದ್ದಾಗಿದೆ. ಪ್ರಾಥಮಿಕ ಹಂತದಿ0ದಲೇ ಮಕ್ಕಳಿಗೆ ಸುಭದ್ರ ಶಿಕ್ಷಣ ನೀಡುವ ಮೂಲಕ ಮಾದರಿ ಹಾಗೂ ಶ್ರೇಷ್ಠ ವ್ಯಕ್ತಿಗಳನ್ನಾಗಿ ನಿರ್ಮಾಣ ಮಾಡಿ ಆದರ್ಶ ಶಿಕ್ಷಕರಾಗಿ ಎಂದು ಹೇಳಿದರು.

ಸರ್ಕಾರ ಶಿಕ್ಷಣ ಕ್ಷೇತ್ರಕ್ಕಾಗಿ ಸಾಕಷ್ಟು ಅನುದಾನ ಮೀಸಲಿರಿಸಿ, ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಉತ್ತಮ ಶಿಕ್ಷಣ ಪಡೆದುಕೊಳ್ಳಲು ಇದರಿಂದ ಮಕ್ಕಳಿಗೆ ಅನುಕೂಲ ಒದಗಿಸಿದೆ. ಮಕ್ಳಳನ್ನು ಸತ್ಪçಜೆಯಾಗಿ ರೂಪುಗೊಳ್ಳಲು ಶಿಕ್ಷಕ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು. ವೃತ್ತಿ ಗೌರವ, ಸೇವಾ ಮನೋಭಾವನೆಯೊಂದಿಗೆ ತಾಯಿಯ ಕರುಣೆ ಹೊಂದಿ, ಮಾದರಿ ಶಿಕ್ಷಕರಾಗಿ ಮಕ್ಕಳ ಭವಿಷ್ಯವನ್ನು ಉತ್ತಮಪಡಿಸಬೇಕು ಎಂದ ಅವರು, ಜಿಲ್ಲೆಯ ಶೈಕ್ಷಣಿಕ ಫಲಿತಾಂಶ ಸುಧಾರಣೆಗೆ ಶ್ರಮಿಸುವಂತೆ ಹೇಳಿದರು.

ಧಾರವಾಡ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಮಾತನಾಡಿ,ಇದು ಶಿಕ್ಷಕರಿಗೆ ಮಹತ್ವದ ದಿನವಾಗಿದೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕಟಿಬದ್ಧರಾಗಿ ಶ್ರಮಿಸಿ,ಗುರುವಿನ ಸ್ಥಾನ ಬಹುದೊಡ್ಡದು,ಮಕ್ಕಳ ಬದುಕನ್ನು ಬಂಗಾರವಾಗಿಸುವ ಕಾರ್ಯ ಮಾಡಿ ಮಕ್ಕಳ ಸರ್ವೊತೋಮುಖ ಏಳಿಗೆಗಾಗಿ ಶ್ರಮಿಸಿ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ದೇಶದ ಭವಿಷ್ಯ ಮಕ್ಕಳಾಗಿದ್ದಾರೆ. ಅಂತಹ ಮಕ್ಕಳ ಭವ್ಯ ಭವಿಷ್ಯವನ್ನು ರೂಪಿಸಿ ಸುಭದ್ರ ದೇಶ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಬಹುಮುಖ್ಯವಾಗಿದ್ದು, ಮಕ್ಕಳಿಗೆ ಶಿಕ್ಷಕರು ತತ್ವಜ್ಞಾನಿಯಾಗಿ ಮಾರ್ಗದರ್ಶಕರಾಗಿ ಅವರ ಸುಂದರ ಕನಸಿಗೆ ಪ್ರೇರಣಾದಾಯಕವಾಗಿ ಪ್ರೋತ್ಸಾಹಿಸಬೇಕು. ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಆಸ್ಥೆ ವಹಿಸಿ, ನಿಯಮಿತವಾಗಿ ವೇಳಾಪಟ್ಟಿ ಹಮ್ಮಿಕೊಂಡು ಮಕ್ಕಳ ಸರ್ವೋತೋಮುಖ ವ್ಯಕ್ತಿತ್ವದ ಬೆಳವಣಿಗೆಗೆ ಜವಾಬ್ದಾರಿಯುತವಾಗಿ ಹಾಗೂ ಅತ್ಯಂತ ಕಾಳಜಿ ಪೂರ್ವಕವಾಗಿ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಮಕ್ಕಳಿಗೆ ನಿರಂತರ ಪರಿಹಾರ ಬೋಧನೆ ಮಾಡಬೇಕು. ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬಿ, ಜಿಲ್ಲೆಯ ಶೈಕ್ಷಣಿಕ ಫಲಿತಾಂಶ ಹೆಚ್ಚಿಸುವಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಶಿಕ್ಷಕ ಓರ್ವ ತತ್ವಜ್ಞಾನಿಯಾಗಿ, ನಿರಂತರ ಅಧ್ಯಯನಶೀಲತೆಯನ್ನು ರೂಢಿಸಿಕೊಂಡು, ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿ ಸಮಾಜ ಸ್ಮರಿಸುವ ಕಾರ್ಯ ನಿರ್ವಹಿಸಬೇಕು. ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಶಿಕ್ಷಣ ಗುಣಮಟ್ಟ ಹೆಚ್ಚಿಸುವಲ್ಲಿ ಶೈಕ್ಷಣಿಕಾ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದರು.

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರಿಗೆ ಪ್ರಶಸ್ತಿ ಪ್ರದಾನ :

2025-26ನೇ ಸಾಲಿನ ವಿಜಯಪುರ ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ : ಇಂಡಿ ಆಶ್ರಯ ಕಾಲನಿ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಶ್ರೀಮತಿ ಎ.ಎ ಜಮಾದಾರ, ಸಿಂದಗಿ ತಾಲೂಕಿನ ಗಣಿಹಾರ ಎಲ್.ಟಿ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಗುರಣ್ಣ ಸಿ ಬಿರಾದಾರ,ವಿಜಯಪುರ ನಗರದ ತಾಜಬಾವಡಿಯ ಸರಕಾರಿ ಉರ್ದು ಗಂಡು ಮಕ್ಕಳ ಶಾಲೆ ನಂ 7ರ ಸಹ ಶಿಕ್ಷಕರಾದ ಶ್ರೀಮತಿ ಡಿ.ಎನ್ ಕುರೇಶಿ,ಚಡಚಣ ತಾಲೂಕಿನ ಚಡಚಣ ಮರಡಿಯ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಶ್ರೀಮತಿ ತಬ್ಬಸ್ಸುಂಬೇಗ ಮೈನುದ್ದೀನಸಾಹೇಬ ಸೌದಿ, ಮುದ್ದೆಬಿಹಾಳ ತಾಲೂಕಿನ ಹುಲಗಬಾಳ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಶ್ರೀಮತಿ ಎಸ್.ಬಿ ಗೊಂಗಡಿ,ಬಸವನ ಬಾಗೇವಾಡಿ ತಾಲೂಕಿನ ಕರಭಂಟನಾಳ ಬಡಾವಣೆಯ (ತಾಂಡಾ)ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ರಾಚಪ್ಪ ವಪ್ಪಾರಿ ಹಾಗೂ ವಿಜಯಪುರ ಗ್ರಾಮೀಣದ ಟಕ್ಕಳಕಿ ರಾವಜಿವಸ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ರಾಜೇಶ ಪಾಟೀಲ ಅವರನ್ನು ಗೌರವಿಸಲಾಯಿತು.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ : ಚಡಚಡಣ ತಾಲೂಕು ವಲಯದ ಗುಂದವಾನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಸಿದರಾಯ ಎಸ್ ಆಕಳವಾಡಿ, ವಿಜಯಪುರ ನಗರದ ಅಫಜಲಪುರ ಟಕ್ಕೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ ಶಾಲೆ ನಂ.49ರ ಸಹ ಶಿಕ್ಷಕರಾದ ಚಂದ್ರಕಾ0ತ ಭಿಮಶಾ ಕನಸೆ,ಮುದ್ದೆಬಿಹಾಳದ ಸರಕಾರಿ ಉರ್ದು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಫರೀದಾ ಎಸ್ ಬಾಗವಾನ,ಇಂಡಿ ತಾಲೂಕಿನ ಗಣವಲಗಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಅಕ್ಬರ್ ಎಸ್ ಬಡಿಗೇರ,ಸಿಂದಗಿ ತಾಲೂಕಿನ ದೇವೂರ ಎಲ್.ಟಿ 1ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪರಶುರಾಮ ಮಲ್ಲಪ್ಪ ಬೆನಕನಹಳ್ಳಿ,ವಿಜಯಪುರ ಗ್ರಾಮೀಣದ ಜಂಬಗಿ(ಆ)ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರಾಜಕುಮಾರ್ ಮ ಮಾಳಿ,ಬಸವನ ಬಾಗೇವಾಡಿ ತಾಲೂಕಿನ ಗೊಳಸಂಗಿ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಭಾರತಿ ವಿ ಗೊಂಗಡಿ ಅವರನ್ನು ಗೌರವಿಸಲಾಯಿತು.

ಫ್ರೌಢಶಾಲಾ ವಿಭಾಗದಲ್ಲಿ : ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಇಂಡಿ ತಾಲೂಕಿನ ಹಳಗುಣಕಿ ಕರ್ನಾಟಕ ಪಬ್ಲಿಕ್ ಶಾಲೆಯ ಸಹ ಶಿಕ್ಷಕ ಸಂಗಮೇಶ ಶಿ ಬಂಡೆ, ಸಿಂದಗಿ ತಾಲೂಕಿನ ರಾಂಪೂರ ಪಿ.ಎ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರಾದ ಸಂತೋಷ ಮ.ಜೇವರ್ಗಿ, ಚಡಚಣದ ಶ್ರೀ ಸಂಗಮೇಶ್ವರ ಬಾಲಕಿಯರ ಪ್ರೌಢ ಶಾಲೆಯ ಹಿರಿಯ ಶಿಕ್ಷಕರಾದ ರಾಜೇಶ ಮಲ್ಲಪ್ಪ ಭಂಡಿ, ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ ‘ಬಿ’ ದೈಹಿಕ ಶಿಕ್ಷಕರಾದ ಕೃಷ್ಣಪ್ಪ ಬ.ಗಾಡಿವಡ್ಡರ, ವಿಜಯಪುರ ನಗರದ ಶ್ರೀ ಬಸವೇಶ್ವರ ಪ್ರೌಢಶಾಲೆಯ ಸಹ ಶಿಕ್ಷಕರಾದ ಎಸ್.ಬಿ ಅವಟಿ, ವಿಜಯಪುರ ಗ್ರಾಮೀಣದ ಟಕ್ಕಳಕಿ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ಭೀಮಗೊಂಡ ಬ.ಕೋಟ್ಯಾಳ ಹಾಗೂ ಮುದ್ದೇಬಿಹಾಳ ತಾಲೂಕಿನ ಕೋಳೂರ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರಾದ ಪ್ರಭುಗೌಡ ರಾರಡ್ಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಲ್ಯಾಪಟಾಪ್ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಇಲಿಯಾಸ ಬೋರಾಮಣಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಸೇಡಶ್ಯಾಳ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೀರಯ್ಯ ವಿ.ಸಾಲಿಮಠ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕರಾದ ಶ್ರೀಮತಿ ಉಮಾದೇವಿ ಸೊನ್ನದ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತದಾರ, ವಿಜಯಪುರ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ ಬಿರಾದಾರ, ಶಿಕ್ಷಣಾಧಿಕಾರಿ ರಾಘವೇಂದ್ರ ಹೊಸೂರ, ಶಿಕ್ಷಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ, ಭಾರತ ಸೇವಾದಳ, ಜಿಲ್ಲೆಯ ತಾಲೂಕಿನಿಂದ ಆಗಮಿಸಿದ ಶಿಕ್ಷಕರು, ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande