ರಾಯಚೂರು, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹಲವು ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಅತ್ಯುತ್ತಮವಾಗಿ ಸೇವೆ ಸಲ್ಲಿಸಿದಲ್ಲಿ, ಅದನ್ನು ಗುರುತಿಸಿ, ಪ್ರತಿ ತಿಂಗಳು ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಅತ್ಯುತ್ತಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂದು ಪ್ರಶಂಶನೀಯ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ ಅವರು ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ನರೇಗಾ ಸೇರಿದಂತೆ ನಾನಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಗಸ್ಟ್-2025ರ ಮಾಹೆಯಲ್ಲಿ ವಿವಿಧ ಯೋಜನೆಗಳಡಿ ಉತ್ತಮ ಪ್ರಗತಿ ಸಾಧಿಸಿದ ಅತ್ಯುತ್ತಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂದು ಆಯ್ಕೆಯಾದ ಲಿಂಗಸೂಗೂರು ತಾಲ್ಲೂಕಿನ ನೀರಲಕೇರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ ವಸ್ತ್ರದ ಅವರಿಗೆ ಪ್ರಶಂಶನೀಯ ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತಿದೆ.
ಲಿಂಗಸೂಗೂರು ತಾಲ್ಲೂಕಿನ ನೀರಲಕೇರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಾಳಜಿ ವಹಿಸಿ ಕಾರ್ಯ ಮಾಡಿದ ರೀತಿಯಲ್ಲಿ ಜಿಲ್ಲೆಯ ಇನ್ನುಳಿದ ಪಿಡಿಓ ಅವರು ಸಹ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಮುಂಬರುವ ದಿನಗಳಲ್ಲಿ ಸಹ ಬೇರೆ ಬೇರೆ ಪಿಡಿಓ ಅವರ ಕಾರ್ಯಕ್ಷಮತೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ನೀಡುವುದರಿಂದ ಅವರು ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಉತ್ತೇಜನ ನೀಡಿದಂತಾಗುತ್ತದೆ ಎಂದು ಸಿಇಓ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ಧಪ್ಪ ಪೂಜೇರಿ, ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಯೋಜನಾ ನಿರ್ದೇಶಕರಾದ ಶರಣಬಸವರಾಜ ಕೆಸರಟ್ಟಿ, ಮುಖ್ಯ ಲೆಕ್ಕಾಧಿಕಾರಿ ವಿಜಯ ಶಂಕರ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನಾನಾ ಯೊಜನೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಪಿಡಿಒ ಮತ್ತು ಸಿಬ್ಬಂದಿ ಸಭೆಯಲ್ಲಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್