ಜುಬಿನ್ ಮೊಹಪಾತ್ರ ಅನಿರೀಕ್ಷಿತ ಭೇಟಿ : ಬಾಕಿ ಕಾಮಗಾರಿಗಳ ಪರಿಶೀಲನೆ
ರಾಯಚೂರು, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಸೆ.29ರಂದು ವಿವಿಧೆಡೆ ಅನಿರೀಕ್ಷಿತ ಭೇಟಿ ಕೈಗೊಂಡು 15ನೇ ಹಣಕಾಸು ಆಯೋಗದ ಅಡಿಯಲ್ಲಿನ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. 6-7 ವರ್ಷಗಳಿಂದ ಬಾಕಿ ಉಳಿದ ಕಾರ್ಯಗಳ ಬಗ್ಗೆ ಪರಿಶೀಲಿಸಿದ ಆಯುಕ್ತರ
ಜುಬಿನ್ ಮೊಹಪಾತ್ರ ವಿವಿಧೆಡೆ ಅನಿರೀಕ್ಷಿತ ಭೇಟಿ: ಬಾಕಿ ಕಾಮಗಾರಿಗಳ ಪರಿಶೀಲನೆ


ಜುಬಿನ್ ಮೊಹಪಾತ್ರ ವಿವಿಧೆಡೆ ಅನಿರೀಕ್ಷಿತ ಭೇಟಿ: ಬಾಕಿ ಕಾಮಗಾರಿಗಳ ಪರಿಶೀಲನೆ


ರಾಯಚೂರು, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಸೆ.29ರಂದು ವಿವಿಧೆಡೆ ಅನಿರೀಕ್ಷಿತ ಭೇಟಿ ಕೈಗೊಂಡು 15ನೇ ಹಣಕಾಸು ಆಯೋಗದ ಅಡಿಯಲ್ಲಿನ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.

6-7 ವರ್ಷಗಳಿಂದ ಬಾಕಿ ಉಳಿದ ಕಾರ್ಯಗಳ ಬಗ್ಗೆ ಪರಿಶೀಲಿಸಿದ ಆಯುಕ್ತರು, ಬಾಕಿ ಇರಿಸಿಕೊಂಡ ಎಲ್ಲ ರಸ್ತೆಗಳು ಮತ್ತು ಚರಂಡಿ ಕಾರ್ಯಗಳನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಠೇಕುದಾರರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ರಸ್ತೆಗಳು ಮತ್ತು ಚರಂಡಿಗಳು ನಿಗದಿಪಡಿಸಿದಂತೆ ವೈಜ್ಞಾನಿಕ ರೀತಿಯಲ್ಲಿಯೇ ಅಗಲ, ಉದ್ದ ಇರುವಂತೆ ಮತ್ತು ಕಾಮಗಾರಿಯು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಘನ ತ್ಯಾಜ್ಯ ನಿರ್ವಹಣೆ ಕಾರ್ಯಗಳ ಪರಿಶೀಲನೆ: ಆಯುಕ್ತರು, ಇದೆ ವೇಳೆ ಘನ ತ್ಯಾಜ್ಯ ನಿರ್ವಹಣೆ ಕಾರ್ಯಗಳ ಪರಿಶೀಲನೆ ನಡೆಸಿದರು.

ನಾಗರಿಕರು, ತ್ಯಾಜ್ಯ ವಿಸರ್ಜಿಸುವ ಅನಧಿಕೃತ ಸ್ಥಳಗಳನ್ನು ತ್ವರಿತವಾಗಿ ತೆರವುಗೊಳಿಸುವಂತೆ ಘನ ತ್ಯಾಜ್ಯ ನಿರ್ವಹಣೆ ತಂಡಕ್ಕೆ ಇದೆ ವೇಳೆ ಆಯುಕ್ತರು ಸೂಚನೆ ನೀಡಿದರು.

ಸಾರ್ವಜನಿಕರಿಂದ ಮೆಚ್ಚುಗೆ: ಘನ ತ್ಯಾಜ್ಯ ನಿರ್ವಹಣೆ ತಂಡದವರು ಈಗಾಗಲೇ, ತ್ಯಾಜ್ಯ ವಿಸರ್ಜಿಸುವ ಅನಧಿಕೃತ ಅನೇಕ ಸ್ಥಳಗಳನ್ನು ತೆರವುಗೊಳಿಸಿದ್ದರಿಂದಾಗಿ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಇದೆ ವೇಳೆ ನಾಗರಿಕರು ಆಯುಕ್ತರ ಮುಂದೆ ಸಂತಷ ವ್ಯಕ್ತಪಡಿಸಿದರು.

ನಾಗರಿಕರಲ್ಲಿ ಮನವಿ: ಸಾರ್ವಜನಿಕರು, ಚರಂಡಿಗಳಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ವಸ್ತುಗಳನ್ನು ಎಸೆಯುವುದರಿಂದ ಅದು ತುಂಬಿ, ಮಳೆ ನೀರು ಸರಾಗವಾಗಿ ಹರಿಯದೇ ರಸ್ತೆಗಳಿಗೆ ಬರುತ್ತಿದೆ. ಈ ರೀತಿ ಆಗಬಾರದು. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ದಂಡದ ಎಚ್ಚರಿಕೆ: ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು ಕಂಡುಬಂದಲ್ಲಿ ಇನ್ಮುಂದೆ ಅಂತವರಿಗೆ ದಂಡ ವಿಧಿಸಲಾಗುವುದು ಮತ್ತು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಇದೆ ವೇಳೆ ಎಚ್ಚರಿಕೆ ನೀಡಿದರು.

ಅಧಿಕಾರಿಗಳು, ಸಿಬ್ಬಂದಿಗೆ ಮನವರಿಕೆ: ರಾಯಚೂರು ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೇಗೇರಿದ್ದು, ಇದರಿಂದಾಗಿ ನಗರದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಮುನ್ನಡೆಯುವ ಉದ್ದೇಶದಿಂದ ಅನಿರೀಕ್ಷಿತ ಭೇಟಿಯಂತಹ ಕಾರ್ಯಕ್ರಮದ ಮೂಲಕ ಪರಿಶೀಲನೆ ಮಾಡಲಾಗುತ್ತಿದೆ.

ಈ ರೀತಿಯ ಕ್ರಮಗಳಿಂದಲೇ ಮಹಾನಗರ ಪಾಲಿಕೆಯ ನಿರ್ವಹಣೆಯು ಹೆಚ್ಚು ಪಾರದರ್ಶಕ ಮತ್ತು ಕಾರ್ಯಕುಶಲತೆಯಿಂದ ನಡೆಯಲಿದೆ ಎಂದು ಇದೆ ವೇಳೆ ಆಯುಕ್ತರು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮನವರಿಕೆ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande