ಕೊಪ್ಪಳ, 30 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಬೋಧಕ ಆಸ್ಪತ್ರೆ, ಕಿಮ್ಸ್ ಕೊಪ್ಪಳ ಹಾಗೂ ಎನ್.ಸಿ.ಡಿ. ಕ್ಲಿನಿಕ್ ಕೊಪ್ಪಳ, ಇವರ ಸಂಯುಕ್ತಾಶ್ರಯದಲ್ಲಿ ಸೆ.30 ರಂದು ಕಿಮ್ಸ್ ಆವರಣದಲ್ಲಿ ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಒಂದು ಬಡಿತವನ್ನು ಕೂಡ ತಪ್ಪಿಸಿಕೊಳ್ಳಬೇಡಿ ಎಂಬ ಘೋಷವಾಕ್ಯದೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಉಮೇಶ ರಾಜೂರ ಅವರು ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮೃತ ಪಡುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿಯೊಬ್ಬರೂ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಒತ್ತಡದ ಬದುಕಿನಲ್ಲಿ ಅಪೌಷ್ಟಿಕ ಆಹಾರ ಸೇವನೆ, ಶ್ರಮ ರಹಿತ ಜೀವನ ಶೈಲಿ ಹಾಗೂ ನಿದ್ರಾಹೀನತೆ, ಹೃದಯದ ಬಗ್ಗೆ ಕಾಳಜಿ ವಹಿಸದೇ ಇರುವುದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ತಿಳಿಸುತ್ತಾ, ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಖಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಎನ್.ಸಿ.ಡಿ. ಸಂಯೋಜಕರಾದ ಡಾ.ಜಯಶ್ರೀ ಎಮ್.ಎಚ್. ಇವರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಹೃದಯ ಕುರಿತ ಯೋಜನೆಗಳ ಬಗ್ಗೆ ಮಾತನಾಡುತ್ತಾ ಪುನೀತ್ ರಾಜಕುಮಾರ ಹೃದಯ ಜ್ಯೋತಿ ಯೋಜನೆಯು ಯಲಬುರ್ಗಾ, ಕುಷ್ಟಗಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರು ತುರ್ತು ಸಮಯದಲ್ಲಿ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಜಿಲ್ಲಾ ಬೋಧಕ ಆಸ್ಪತ್ರೆಯ ಎನ್.ಸಿ.ಡಿ ಕ್ಲಿನಿಕ್‍ನ ಆಪ್ತಸಮಾಲೋಚಕ ಶಿವಪುತ್ರಪ್ಪ ಇವರು ಸಣ್ಣ ಎದೆ ನೋವು, ಹೃದಯದ ಖಾಯಿಲೆ ಬಗ್ಗೆ ಕಾಳಜಿವಹಿಸದೆ ಇರುವುದು, ಅಧಿಕ ಕೊಬ್ಬಿನ ಆಹಾರ ಸೇವನೆ ಹೃದಯಾಘಾತಕ್ಕೆ ಕಾರಣವಾಗಬಹುದು. ಅದ್ದರಿಂದ ನಿಯಮಿತವಾಗಿ ಹೃದಯ ಸಪಾಸಣೆ ಮಾಡಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ ಸಾಲಮನಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕೃಷ್ಣ ಓಂಕಾರ, ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಉಮೇಶ ರಾಜೂರ, ಜನರಲ್ ಮೆಡಿಸಿನ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶ್ರೀನಿವಾಸ ಜೂಟುರು, ಡಾ. ಗುರುಪ್ರಸಾದ, ಡಾ. ಚೇತನ್, ಜಿಲ್ಲಾ ವ್ಯಸನ ಮುಕ್ತ ಕೇಂದ್ರದ ಸೈಕಲಾಜಿಸ್ಟ್ ಶಾಂತಮ್ಮ ಕಟ್ಟಿಮನಿ, ಜಿಲ್ಲಾ ಆಸ್ಪತ್ರೆಯ ಎನ್.ಸಿ.ಡಿ. ಕ್ಲಿನಿಕ್‍ನ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ನಂತರ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್