ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ : ಅರ್ಹರು ತಪ್ಪದೇ ಪಾಲ್ಗೊಳ್ಳಿ
ಬಳ್ಳಾರಿ, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಿಲ್ಲೆಯಾದ್ಯಂತ ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಗುತ್ತಿದ್ದು, ಅರ್ಹ ದೇವದಾಸಿ ಮಹಿಳೆಯರು ನಿಗದಿತ ನಮೂನೆಗಳಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇ
ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ : ಅರ್ಹರು ತಪ್ಪದೇ ಪಾಲ್ಗೊಳ್ಳಿ


ಬಳ್ಳಾರಿ, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯಾದ್ಯಂತ ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಗುತ್ತಿದ್ದು, ಅರ್ಹ ದೇವದಾಸಿ ಮಹಿಳೆಯರು ನಿಗದಿತ ನಮೂನೆಗಳಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಲು ಬಯಸುವ ದೇವದಾಸಿ ಮಹಿಳೆಯರು ಮತ್ತು ಕುಟುಂಬಗಳಿಂದ ನಿಗಧಿತ ನಮೂನೆಗಳಲ್ಲಿ ಅರ್ಜಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಅದೇ ಕಚೇರಿಗೆ ಸಲ್ಲಿಸಬೇಕು.

1984ರ ಮುಂಚೆ ಜನಿಸಿದ ಮಹಿಳೆಯರು ಅರ್ಹರು:

ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ದೇವದಾಸಿಯರ(ಸಮರ್ಪಣಾ ನಿಷೇಧ)ಕಾಯ್ದೆ 1982ರನ್ನು ಜಾರಿಗೆ ತಂದಿದ್ದು, ಈ ಕಾಯ್ದೆಗೆ ದಿನಾಂಕ:11-01-1984ರಲ್ಲಿ ಅಧಿಕೃತವಾಗಿ ಭಾರತದ ರಾಷ್ಟ್ರಪತಿಗಳು ಅಂಕಿತ ನೀಡಿದ್ದು, ಈ ಕಾಯ್ದೆಯು ರಾಜ್ಯದ ವಿಶೇಷ ರಾಜ್ಯ ಪತ್ರದಲ್ಲಿ ದಿನಾಂಕ:31-1-1984ರಂದು ಪ್ರಕಟಗೊಂಡಿದೆ.

ಹಾಗಾಗಿ ಕರ್ನಾಟಕ ದೇವದಾಸಿ ಸಮರ್ಪಣಾ ನಿಷೇದ ಕಾಯ್ದೆಯನ್ವಯ ಮಾಜಿ ದೇವದಾಸಿ ಮಹಿಳೆಯರು ಮತ್ತು ಕುಟುಂಬದವರು ನಮೂನೆ-1, 2, 3 ರನ್ನು ಭರ್ತಿ ಮಾಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಲು ಬರುವಾಗ ಕಾಯ್ದೆಯ ದಿನಾಂಕ: 11-01-1984ರ ಮುಂಚೆ ಜನಿಸಿದ ಮಹಿಳೆಯರು ಮಾತ್ರ ಅರ್ಜಿ ಪಡೆಯತಕ್ಕದ್ದು, ಕಾಯ್ದೆಯ ನಂತರ ಜನಿಸಿರುವ ಮಹಿಳೆಯರ ಅರ್ಜಿಗಳು ಬಂದಲ್ಲಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ಈ ಕಚೇರಿಗೆ ವರದಿ ಸಲ್ಲಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಈಗಾಗಲೇ ಸೂಚಿಸಿದೆ. ತಪ್ಪಿದ್ದಲ್ಲಿ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಂದಂತಹ ನಮೂನೆ 1, 2, 3 ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ತಾಲ್ಲೂಕು ಯೋಜನಾ ಅನುಷ್ಠಾನಾಧಿಕಾರಿಗಳು ದೇವದಾಸಿ ಪುನರ್ವಸತಿ ಯೋಜನೆ ಹಾಗೂ ಸಂಬಂಧಪಟ್ಟ ವಲಯ ಮೇಲ್ವಿಚಾರಕಿಯರ ಜಂಟಿ ತನಿಖಾ ವರದಿಯೊಂದಿಗೆ ತಾಲ್ಲೂಕು ಮಟ್ಟದ ಮೌಲ್ಯಮಾಪನ ಮತ್ತು ಮೇಲ್ವಿಚಾರಣಾ ಸಮಿತಿಗೆ ಮಂಡಿಸಿ ಸಮಿತಿಯಲ್ಲಿ ಅನುಮೋದಿಸಿ ಅಥವಾ ತಿರಸ್ಕರಿಸಿ ಸಭಾ ನಡವಳಿಗಳೊಂದಿಗೆ ಸಂಬಂಧ ಪಟ್ಟ ಎಲ್ಲಾ ದಾಖಲೆಗಳನ್ನು ದೃಢೀಕರಿಸಿ ಜಿಲ್ಲಾ ಮಟ್ಟದ ಸಮಿತಿಗೆ ಮಂಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande