ರೇಬಿಸ್ ರೋಗದ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಾಗಾರ
ಕೊಪ್ಪಳ, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ನೀನು, ನಾನು ಮತ್ತು ನಮ್ಮ ಸಮಾಜ ಎನ್ನುವ ಮಾತಿನಂತೆ ನಮ್ಮ ಕೊಪ್ಪಳ ಜಿಲ್ಲೆಯನ್ನು ರೇಬಿಸ್ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲ
ರೇಬಿಸ್ ರೋಗದ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಾಗಾರ


ರೇಬಿಸ್ ರೋಗದ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಾಗಾರ


ಕೊಪ್ಪಳ, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ನೀನು, ನಾನು ಮತ್ತು ನಮ್ಮ ಸಮಾಜ ಎನ್ನುವ ಮಾತಿನಂತೆ ನಮ್ಮ ಕೊಪ್ಪಳ ಜಿಲ್ಲೆಯನ್ನು ರೇಬಿಸ್ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪ್ರಾಣಿ ದಯಾ ಸಂಘ ಹಾಗೂ ಕೊಪ್ಪಳ ಕೃಷಿ ತಂತ್ರಜ್ಞರ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕೊಪ್ಪಳ ಜಿಲ್ಲಾ ಪಂಚಾಯತ್‍ನ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರೇಬಿಸ್ ದಿನದ ಅಂಗವಾಗಿ ಒಂದು ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ರೇಬಿಸ್ ರೋಗದ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಈ ರೇಬಿಸ್ ರೋಗದ ಕುರಿತು ಹೆಚ್ಚಾಗಿ ಜಾಗೃತಿ ಕಾರ್ಯಕ್ರಮ ಮಾಡಬೇಕು. ಅಂತಹ ಪ್ರದೇಶಗಳಲ್ಲಿ ಹೈನುಗಾರಿಕೆ, ದನ-ಕರುಗಳ ಸಾಕಾಣಿಕೆ ಹೆಚ್ಚಾಗಿ ಇರುವುದರಿಂದ ಅಲ್ಲಿ ರೇಬಿಸ್ ಬಗ್ಗೆ ಮಾಹಿತಿ ನೀಡುವ ಮೂಲಕ ಅವರಿಗೆ ಜಾಗೃತಿ ಮೂಡಿಸಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಬೀದಿನಾಯಿ ಸಂಖ್ಯೆಯನ್ನು ತಡೆಗಟ್ಟಬೇಕು. ಹಾಗೆಯೇ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯಲ್ಲಿ ಇದಕ್ಕಾಗಿ ಒಂದು ಸಮಿತಿಯನ್ನು ಸಹ ಮಾಡಲಾಗಿದೆ. ಎಲ್ಲರೂ ಸೇರಿ ನಮ್ಮ ಜಿಲ್ಲೆಯನ್ನು ರೇಬಿಸ್ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಬೇಕು. ಇದರ ಜೊತೆಗೆ ವೆಟರ್ನರಿ ವೈದ್ಯರು ಸಹ ಸಾರ್ವಜನಿಕರಿಗೆ ರೇಬಿಸ್ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಬೀದಿನಾಯಿಗಳ ಸಂಖ್ಯೆ ಬಹಳ ಹೆಚ್ಚಾಗಿದೆ. ಎಲ್ಲಾ ಕಡೆಗೂ ಅದೇ ಸಮಸ್ಯೆ, ಎಲ್ಲರೂ ಕೂಡ ಒಟ್ಟಾಗಿ ಬೀದಿನಾಯಿಗಳನ್ನು ಅನಿಮಲ್ ಕಂಟ್ರೋಲ್ ಬೋರ್ಡ್‍ಗೆ ಸೇರಿಸುವ ಕೆಲಸ ಮಾಡಿ ರೇಬಿಸ್ ಕಡಿಮೆ ಮಾಡಲು ನಾವು ಪ್ರಯತ್ನ ಮಾಡಿದಾಗ ಮಾತ್ರ 2030ಕ್ಕೆ ನಮ್ಮ ರಾಜ್ಯವನ್ನು ರೇಬಿಸ್ ಮುಕ್ತ ರಾಜ್ಯವನ್ನಾಗಿಸಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಮಾತನಾಡಿ, ಈ ಒಂದು ಆರೋಗ್ಯ ಕಾರ್ಯಕ್ರಮ ಅಂದರೆ ಪ್ರಾಣಿಗಳು ಮತ್ತು ಮಾನವರ ಆರೋಗ್ಯ ಎರಡು ಒಂದೇ ಎಂದು ಅರ್ಥ. ಪ್ರಾಣಿಗಳು ಆರೋಗ್ಯವಾಗಿದ್ದರೆ ನಾವು ಸಹ ರೇಬಿಸ್‍ನಂತಹ ರೋಗದಿಂದ ದೂರವಿರಲು ಸಾಧ್ಯ, ಹಸುವಿನ ಹಾಲು ಸೇರಿದಂತೆ ಇತರೆ ಪದಾರ್ಥಗಳನ್ನು ನಾವು ಉಪಯೋಗಿಸುತ್ತೇವೆ. ಹಾಗಾಗಿ ನಮಗೆ ನಮ್ಮ ಆರೋಗ್ಯದ ಕಾಳಜಿಯ ಜತೆಗೆ ಸಾಕು ಪ್ರಾಣಿಗಳ ಆರೋಗ್ಯವು ಸಹ ಬಹಳ ಮುಖ್ಯ. ಅದಕ್ಕಾಗಿ ಆರೋಗ್ಯ ಇಲಾಖೆ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಯೋಗದೊಂದಿಗೆ ಇಂತಹ ಕಾರ್ಯಾಗಾರಗಳು ನಡೆಯಬೇಕು ಎಂದು ಹೇಳಿದರು.

ಕೊಪ್ಪಳ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಿರ್ಮಲಾ ಎಮ್.ಕೆ ಅವರು ಮಾತನಾಡಿ, ರೇಬಿಸ್ ರೋಗದ ಕುರಿತು ತಾಂತ್ರಿಕ ಕಾರ್ಯಗಾರದ ಸದುಪಯೋಗ ಪಡಿಸಿಕೊಂಡು, 2030 ಕ್ಕೆ ರೇಬಿಸ್ ಮುಕ್ತ ರಾಜ್ಯವನ್ನಾಗಿ ಮಾಡುವಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.

ಈ ಸಂದರ್ಭ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ರೇಬಿಸ್ ದಿನದ ಅಂಗವಾಗಿ ರೇಬಿಸ್ ತಡೆಗಟ್ಟಲು ಮುಂದಾಗೋಣ: ನೀವು, ನಾನು, ನಮ್ಮ ಸಮಾಜ ಎನ್ನುವ ಪೆÇೀಸ್ಟರ್ ಬಿಡುಗಡೆ ಮಾಡಲಾಯಿತು.

ಕಾರ್ಯಾಗಾರದಲ್ಲಿ ಬೆಂಗಳೂರು, ಹೆಬ್ಬಾಳದ ಪಶು ವೈದ್ಯಕೀಯ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಜಿ.ಕವಿತಾ ಹಾಗೂ ಕೊಪ್ಪಳದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಗವಿಸಿದ್ದೇಶ ವಿ.ಆರ್ ಅವರು ರೇಬಿಸ್ ರೋಗದ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಾಗಾರದ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಗುಲ್ಬರ್ಗಾದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ ಡಾ.ರಮೇಶ ದೊಡ್ಡಮನಿ, ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕ ಡಾ. ಪಿ. ಮಲ್ಲಯ್ಯ, ಮುನಿರಾಬಾದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಶ್ರೀಧರ ಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಕೊಪ್ಪಳ ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷ ಹಾಗೂ ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು ಇದರ ನಿಕಟಪೂರ್ವ ಕಾರ್ಯದರ್ಶಿಗಳಾದ ಡಾ. ವೀರಣ್ಣ ಕಮತರ ಸೇರಿದಂತೆ ಕೊಪ್ಪಳ ಜಿಲ್ಲೆಯ ವೆಟರ್ನರಿ ವೈದ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande