ವಿಜಯಪುರ, 30 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ, ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರ ಜಲಮೂಲಗಳ ಸಂರಕ್ಷಣೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಜಲಶಕ್ತಿ ಅಭಿಯಾನ ಯೋಜನೆಯ ಅತ್ಯುತ್ತಮ ಅನುಷ್ಠಾನನಕ್ಕೆ ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ವಿಜಯಪುರ ಪ್ರಥಮ ಸ್ಥಾನ ಪಡೆದಿದೆ.
ಜಲಮೂಲಗಳ ಸಂರಕ್ಷಣೆ, ಅಂರ್ತಜಲ ವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಹಾಗೂ ನೀರಿನ ಸಮಸ್ಯೆ ನಿವಾರಿಸಲು ಕೈಗೊಂಡ ಜಲಶಕ್ತಿ ಅಭಿಯಾನ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲಾ ಪಂಚಾಯತಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿ 25 ಲಕ್ಷ ರೂ. ನಗದು ಬಹುಮಾನಕ್ಕೆ ಭಾಜನವಾಗಿದೆ.
ನೀರಿನ ತೊಟ್ಟಿಗಳ ನವೀಕರಣ, ಕೊಳವೆ ಬಾವಿಗಳ ಮರುಬಳಕೆ ಮತ್ತು ಮರುಪೂರಣ, ಜಲಾನಯನ ಅಭಿವೃದ್ಧಿ ಮತ್ತು ತೀವ್ರ ಅರಣೀಕರಣ. ಈ ಅಭಿಯಾನದ ಮೂಲಕ ಭಾರಿ ಜಾಗೃತಿ ಮೂಡಿಸಲಾಗಿದ್ದು, ನಾನಾ ಭಾಗೀದಾರರು ಜಲ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ಆರಂಭಿಸಿದ್ದು, ಜೆಎಸ್‍ಎ-1 ಫಲಿತಾಂಶವು ಸುಧಾರಿತ ನೀರಿನ ಸಂರಕ್ಷಣೆಯಾಗಿದೆ ಎಂದು ಹೇಳಬಹುದು.
ವಿಜಯಪುರ ಜಿಲ್ಲೆಯು ಜಲಶಕ್ತಿ ಅಭಿಯಾನ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಜತೆಗೆ ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ.
ಜಲಶಕ್ತಿ ಉದ್ದೇಶಗಳು : ನೀರಿನ ಕೊರತೆ ನಿವಾರಿಸುವುದು, ಮಳೆ ನೀರನ್ನು ಹರಿಯುವಂತೆ ಮಾಡುವುದು, ಹರಿಯುವ ನೀರನ್ನು ತಡೆಯುವುದು, ತಡೆದ ನೀರನ್ನು ಇಂಗಿಸುವುದು, ಜಲ ಸಂಪನ್ಮೂಲಗಳ ಸಂರಕ್ಷಣೆ, ಮರುಸ್ಥಾಪನೆ, ಮರುಬಳಕೆಗೆ ಉತ್ತೇಜಿಸುವುದು, ಅಮೃತ ಸರೋವರಗಳ ರಚನೆ/ನವೀಕರಣದ ಮೂಲಕ ನೀರಿನ ಸಂಗ್ರಹಣೆ ಹೆಚ್ಚಿಸುವುದು, ಎಲ್ಲರಿಗೂ ನೀರು-ಸುರಕ್ಷಿತ ಭವಿಷ್ಯ ನಿರ್ಮಿಸುವುದು ಜಲಶಕ್ತಿ ಉದ್ದೇಶವಾಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೆರೆ, ಕಲ್ಯಾಣಿಗಳ ಅಭಿವೃದ್ಧಿ ಮಾಡುವುದು. ನೀರು ಹರಿದು ಹೋಗುವ ನಾಲೆ, ಕಾಲುವೆಗಳ ಪುನಶ್ವೇತನ, ಹೊಸ ಕೆರೆ, ಗೋಕಟ್ಟೆ, ಚೆಕ್ಕ್ ಡ್ಯಾಂಗಳ ನಿರ್ಮಾಣ, ಕೊಳವೆಬಾವಿ ಮರುಪೂರಣ, ಮಳೆ ನೀರು ಸಂಗ್ರಹ ಮಾದರಿ ಅಳವಡಿಕೆ, ಅರಣ್ಯೀಕರಣ ಕಾಮಗಾರಿಗೆ ಅವಕಾಶವಿದೆ. ನೀರಾವರಿಗೆ ಬಾವಿ ನಿರ್ಮಾಣ, ಸೋಕ್ ಪಿಟ್ ಗಳ ನಿರ್ಮಾಣ, ಬದುಗಳ ನಿರ್ಮಾಣ, ಕೃಷಿಹೊಂಡದಂತಹ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತದೆ.
ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರ ಜತೆಗೆ ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವುದು. ಮುಂಗಾರು ಪೂರ್ವದ 100 ದಿನಗಳ ಅವಧಿಯಲ್ಲಿ ಪ್ರತಿ ಗ್ರಾಮದಲ್ಲಿ ಮಳೆ ನೀರು ಸಂರಕ್ಷಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು, ಮಳೆ ನೀರು ಸಂರಕ್ಷಣೆ ಮಾಡಲು ನರೇಗಾ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದ್ದು, ಅಂತರ್ಜಲ ಸಂರಕ್ಷಣೆಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಜಿಲ್ಲೆಯ ಒಟ್ಟು 211 ಗ್ರಾಮ ಪಂಚಾಯತಿಗಳಲ್ಲಿ ಜಲ ಶಕ್ತಿ ಕಾಮಗಾರಿಗಳು ಕೈಗೊಳ್ಳಲಾಗಿದೆ. ಜಲ ಶಕ್ತಿ ಅಭಿಯಾನದಡಿ ಜಿಲ್ಲೆಗೆ ಒಟ್ಟು 10000 ಕಾಮಗಾರಿಗಳ ಗುರಿ ನೀಡಲಾಗಿತ್ತು. ಆದರೆ ಗುರಿಗಿಂತ ಅಧಿಕ 11453 ಕ್ಕೂ ಅಧಿಕ ಕಾಮಗಾರಿಗಳನ್ನು ಜಿಲ್ಲೆಯಾದ್ಯಂತ ಅನುಷ್ಠಾನ ಮಾಡಲಾಗಿದೆ.
ಕೆರೆ ಅಭಿವೃದ್ಧಿ, ಕೃಷಿ ಹೊಂಡ, ಬದು ನಿರ್ಮಾಣ, ತೆರೆದ ಬಾವಿ, ನಾಲಾ ಹೂಳೆತ್ತುವುದು, ಮಳೆ ನೀರು ಕೊಯ್ದು ಮತ್ತು ಇತರೆ ನೀರಿನ ಸಂರಕ್ಷಣೆ ಕಾಮಗಾರಿ ಸೇರಿದಂತೆ ವೈಯಕ್ತಿಕ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ.
2024ರ ಸೆಪ್ಟೆಂಬರ್ 6ರಂದು ರಾಷ್ಟ್ರವ್ಯಾಪಿ ಪ್ರಾರಂಭವಾದ ಈ “ಜಲ ಸಂಚಯ–ಜನ ಭಾಗಿದಾರಿ”ಅಭಿಯಾನದ ಉದ್ದೇಶ ಭೂಗರ್ಭ ಜಲ ಸಂರಕ್ಷಣೆ, ಮಳೆ ನೀರಿನ ಸಂಗ್ರಹಣೆ ಹಾಗೂ ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸುವುದಾಗಿದೆ. ಜನರಿಗೆ ನೀರಿನ ಮಹತ್ವ, ನೀರಿನ ಸಂರಕ್ಷಣೆ ವಿಧಾನಗಳ ಬಗ್ಗೆ ಅರಿವು ಮೂಡಿಸುದಾಗಿದೆ. ಜೆಎಸ್‍ಜೆಬಿ ಅಭಿಯಾನದಡಿ ವಿಜಯಪುರ ಜಿಲ್ಲೆಯ ಉತ್ತಮ ಸಾಧನೆ ಮಾಡಿದೆ. ಈ ಹಂತದಲ್ಲಿ ಸಹಕರಿಸಿದ ಸಂಘ ಸಂಸ್ಥೆಗಳು, ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಜೆಎಸ್‍ಜೆಬಿ ಅಭಿಯಾನದಡಿ ವಿಜಯಪುರ ಜಿಲ್ಲೆಗೆ ರೂ.25 ಲಕ್ಷ ಅನುದಾನವನ್ನು ಬಹುಮಾನದ ರೂಪದಲ್ಲಿ ಘೋಷಿಸಿರುವುದಕ್ಕೆ ಜಿಲ್ಲೆಯ ಎಲ್ಲಾ ಇಒರವರ, ಎಡಿಯವರ, ಪಿಡಿಒಗಳು ಮತ್ತು ನರೇಗಾ ತಂಡದ ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande