ಕೊಪ್ಪಳ, 30 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ತರಬೇತಿ ಸಂಸ್ಥೆ ಕೊಪ್ಪಳ ವತಿಯಿಂದ ಲಿಪಿಕ ನೌಕರರಿಗೆ ನೀಡಿದ ಸಾಮಾನ್ಯ ಬುನಾದಿ ತರಬೇತಿಯ ಸದುಪಯೋಗವನ್ನು ತಾವೆಲ್ಲರೂ ಪಡೆದುಕೊಳ್ಳಬೇಕೆಂದು ಜಿಲ್ಲಾ ತರಬೇತಿ ಸಂಸ್ಥೆ ಕೊಪ್ಪಳ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಹೇಳಿದ್ದಾರೆ.
ಅವರು ಮಂಗಳವಾರ ಸರ್ಕಾರಿ ನೌಕರರ ಭವನ ಕೊಪ್ಪಳದಲ್ಲಿ ಆಡಳಿತ ತರಬೇತಿ ಸಂಸ್ಥೆ ಮೈಸೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಕೊಪ್ಪಳ ಹಾಗೂ ಜಿಲ್ಲಾ ತರಬೇತಿ ಸಂಸ್ಥೆ, ಕೊಪ್ಪಳರವರ ಸಂಯುಕ್ತಾಶ್ರಯದಲ್ಲಿ 2025-26 ನೇ ಸಾಲಿನ ಲಿಪಿಕ ನೌಕರರ ಸಾಮಾನ್ಯ ಬುನಾದಿ ತರಬೇತಿ ಪಡೆದ ತರಬೇತಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡಿಗೆ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತರಬೇತಿ ಅವಧಿಯಲ್ಲಿ ನೀಡಿದ ಮಾಹಿತಿಯನ್ನು ತಮ್ಮ ಕಛೇರಿ ಕೆಲಸ ಕಾರ್ಯಗಳಲ್ಲಿ ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಹಲವಾರು ನುರಿತ ತರಬೇತಿದಾರರನ್ನು ಕರೆಸಿ ತಮಗೆ 42 ದಿನಗಳ ಕಾಲ ತರಬೇತಿ ನೀಡಲಾಗಿದೆ. ಸರಕಾರಿ ನೌಕರರಿಗೆ ಕಚೇರಿ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯಬೇಕಾದರೆ ಇಂತಹ ತರಬೇತಿಗಳ ಅವಶ್ಯಕತೆ ಬಹಳ ಇದೆ. ತರಬೇತಿ ಅವಧಿಯಲ್ಲಿ ತಮಗೆ ವಿವಿಧ ಕಛೇರಿಗಳಿಗೆ ಭೇಟಿ, ಪ್ರವಾಸ, ಕಚೇರಿ ಕೆಲಸ ಕಾರ್ಯಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ತರಬೇತಿ ಮುಗಿಸಿ ಹೊರ ಹೋಗುತ್ತಿರುವ ತಮಗೆಲ್ಲರಿಗೂ ಶುಭಾಶಯಗಳು ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸುರೇಶ ಜಿ. ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ವೃತ್ತಿ ಜೀವನದಲ್ಲಿ ತರಬೇತಿ ಅವಶ್ಯಕತೆ ಬಹಳ ಇದೆ. ತರಬೇತಿ ಪಡೆದ ತಾವೆಲ್ಲರೂ ಧನ್ಯರು. ಮೈಸೂರು ಆಡಳಿತ ತರಬೇತಿ ಸಂಸ್ಥೆಯು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದರಿಂದ ಸರಕಾರಿ ನೌಕರರಿಗೆ ತುಂಬಾ ಅನುಕೂಲವಾಗಲಿದೆ. ತರಬೇತಿ ಅವಧಿಯಲ್ಲಿ ತಾವೆಲ್ಲರೂ ಹೊಸದನ್ನು ಕಲಿಯುವುದರ ಜೊತೆಗೆ ಬಹಳಷ್ಟು ಮಾಹಿತಿಯನ್ನು ಪಡೆದಂತಾಗಿದೆ ಎಂದು ಹೇಳಿದರು.
ಸಾಮಾನ್ಯ ಬುನಾದಿ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ನಂತರ ಪ್ರಶಿಕ್ಷಣಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮೈಲಾರ ರಾವ್ ಕುಲಕರ್ಣಿ, ಲಾಯಕ್ ಅಲಿ, ಜಿಲ್ಲಾ ತರಬೇತಿ ಸಂಸ್ಥೆ ಕೊಪ್ಪಳದ ಶ್ರೀಧರ್, ನರ್ಮದಾ, ಗಾಯಿತ್ರಿ, ಸೇರಿದಂತೆ ಇತರೆ ಹಲವಾರು ಜನರು ಮತ್ತು ಸಾಮಾನ್ಯ ಬುನಾದಿ ತರಬೇತಿ ಪಡೆದ ಪ್ರಶಿಕ್ಷಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್