ವಿಜಯಪುರ, 30 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಬೆಳಗಾವಿ ನಗರದಲ್ಲಿ ಖಾಸಗಿ ಹಿಡಿತದಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಲು ಕ್ರಮ ಕೈಗೊಂಡ ಕಾರಣ ರೈತರು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಇವರನ್ನು ಸನ್ಮಾನಿಸಿದರು.
ಮಂಗಳವಾರ ವಿಜಯಪುರ ನಗರದಲ್ಲಿರುವ ಸಚಿವರ ಗೃಹ ಕಛೇರಿಗೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಚುನ್ನಪ್ಪ ಪೂಜಾರಿ ಬಣ) ಕೊಲ್ಹಾರ ತಾಲೂಕ ಅಧ್ಯಕ್ಷ ಸೋಮು ಬಿರಾದಾರ ನೇತೃತ್ವದಲ್ಲಿ ರೈತರು ಸಚಿವ ಶಿವಾನಂದ ಪಾಟೀಲ ಅವರನ್ನು ಸನ್ಮಾನಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲೂಕ ಅಧ್ಯಕ್ಷ ಸೋಮು ಬಿರಾದಾರ, ಬೆಳಗಾವಿ ನಗರದಲ್ಲಿ ಜೈಕಿಸಾನ್ ಹೆಸರಿನಲ್ಲಿ ನಡೆಯುತ್ತಿದ್ದ ಖಾಸಗಿ ತರಕಾರಿ ಮಾರುಕಟ್ಟೆಯಲ್ಲಿ ರೈತರ ಶೋಷಣೆ ನಡೆಯುತ್ತಿತ್ತು. ಖಾಸಗೀಯವರ ಕಪಿಮುಷ್ಟಿಯಲ್ಲಿ ಸಿಲುಕಿ ರೈತರು ತಾವು ಪರಿಶ್ರಮದಿಂದ ಬೆಳೆದಿದ್ದ ತರಕಾರಿ ಬೆಳೆಯನ್ನು ವರ್ತಕರ ಮೋಸದ ದರಕ್ಕೆ ಮಾರುವ ದುಸ್ಥಿತಿ ಇತ್ತು ಎಂದು ಖಾಸಗಿ ತರಕಾರಿ ಮಾರುಕಟ್ಟೆ ಸೃಷ್ಟಿಸಿದ್ದ ಸಂಕಷ್ಟದ ದುಸ್ಥಿತಿಯನ್ನು ವಿವರಿಸಿದರು.
ತಮ್ಮ ರಾಜಕೀಯ ಇಚ್ಛಾಶಕ್ತಿ ಹಾಗೂ ಬದ್ಧತೆಯ ಕಾರಣದಿಂದ ಖಾಸಗಿಯವರ ಮೋಸದ ಹಿಡಿತದಿಂದ ತರಕಾರಿ ಬೆಳೆಯುವ ರೈತರನ್ನು ಮುಕ್ತಗೊಳಿಸಲು ತಾವು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಿದ್ದೀರಿ. ಆ ಮೂಲಕ ಜೈಕಿಸಾನ್ ತರಕಾರಿ ಮಾರುಕಟ್ಟೆ ಪ್ರದೇಶದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸ್ಥಳಕ್ಕೆ ಸ್ಥಳಾಂತರಿಸಿ ಶೋಷಣೆಯಿಂದ ಅನ್ನದಾತರನ್ನು ರಕ್ಷಿಸಿ, ರೈತರ ಹಿತರಕ್ಷಣೆ ಮಾಡಿದ್ದೀರಿ. ಇದಕ್ಕಾಗಿ ಅನ್ನದಾತರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಸೋಮು ಬಿರಾದಾರ ಹೇಳಿದರು.
ತಾವು ಸಚಿವರಾದ ಬಳಿಕ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಕಬ್ಬು ತೂಕದಲ್ಲಿ ಮಾಡುತ್ತಿದ್ದ ವಂಚನೆ ತಡೆಯುವಲ್ಲಿ ಕಠಿಣ ಕ್ರಮ ಕೈಗೊಂಡಿದ್ದೀರಿ. ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸುವ ಮೂಲಕ ದಿಟ್ಟ ನಿರ್ಧಾರದಿಂದ ರೈತರ ಹಿತ ಕಾಯುವ ಕೆಲಸ ಮಾಡಿದ್ದೀರಿ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆಯ ಶಶಿಕಾಂತ ಬಿರಾದಾರ, ಮುದುಕಣ್ಣ ಚಲವಾದಿ, ಬಾಲನಗೌಡ ಪಾಟೀಲ, ಶ್ರೀಶೈಲ ಬೆನ್ನೂರು, ಕಲ್ಲಪ್ಪ ಗಿಡ್ಡಪ್ಪಗೋಳ, ಶ್ರೀಶೈಲ ಮಾದರ ಬಳೂತಿ, ಮೈನುಕ ಮುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande