ಪ್ರವಾಹ ಪೀಡಿತರಿಗೆ ಹೆಚ್ಚುವರಿ ಪರಿಹಾರ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ
ಕಲಬುರಗಿ, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಉತ್ತರ ಕರ್ನಾಟಕ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿ ನಡೆಸಿ ರೈತರು ಹಾಗೂ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ಪ್ಯಾಕೇಜ್ ಘೋಷಿಸಿದರು. ಬೆಳೆ ಪರಿಹಾರ: NDRF ನಿಯಮದಂತೆ ಕುಷ್ಕಿ ಜಮೀನಿಗೆ
Cm


ಕಲಬುರಗಿ, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಉತ್ತರ ಕರ್ನಾಟಕ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿ ನಡೆಸಿ ರೈತರು ಹಾಗೂ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ಪ್ಯಾಕೇಜ್ ಘೋಷಿಸಿದರು.

ಬೆಳೆ ಪರಿಹಾರ:

NDRF ನಿಯಮದಂತೆ ಕುಷ್ಕಿ ಜಮೀನಿಗೆ ಹೆಕ್ಟೇರ್‌ಗೆ ₹8,500, ನೀರಾವರಿಗೆ ₹17,000, ಬಹುವಾರ್ಷಿಕ ಬೆಳೆಗೆ ₹22,500 ನೆರವು ಲಭ್ಯ. ಇದರ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತೀ ಹೆಕ್ಟೇರ್‌ಗೆ ₹8,500 ನೀಡುವುದರಿಂದ, ಕುಷ್ಕಿಗೆ ಒಟ್ಟು ₹17,000, ನೀರಾವರಿಗೆ ₹25,500 ಮತ್ತು ಬಹುವಾರ್ಷಿಕ ಬೆಳೆಗೆ ₹31,000 ಪರಿಹಾರ ದೊರಕಲಿದೆ. ಒಟ್ಟಾರೆ ₹2000–₹2500 ಕೋಟಿ ಪರಿಹಾರ ವಿತರಣೆ ಆಗಲಿದೆ ಎಂದು ತಿಳಿಸಿದರು.

ಹಾನಿ ಪ್ರಮಾಣ:

ಪ್ರಾಥಮಿಕ ಅಂದಾಜು ಪ್ರಕಾರ ರಾಜ್ಯದಲ್ಲಿ 9.60 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಇದರಲ್ಲಿ 9.03 ಲಕ್ಷ ಹೆಕ್ಟೇರ್ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿಯೇ ಹಾನಿಗೊಳಗಾಗಿದೆ. ಶೇ.95ರಷ್ಟು ಹಾನಿ ಈ ಜಿಲ್ಲೆಗಳಲ್ಲಿ ಸಂಭವಿಸಿದೆ. ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ 117 ಗ್ರಾಮಗಳು ತೀವ್ರ ಸಂಕಷ್ಟಕ್ಕೀಡಾಗಿದ್ದು, 80 ಕಾಳಜಿ ಕೇಂದ್ರಗಳಲ್ಲಿ 10,576 ಜನರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮಾನವ ಮತ್ತು ಜಾನುವಾರು ನಷ್ಟ:

ಜೂನ್‌ರಿಂದ ಇಂದುವರೆಗೆ ಪ್ರವಾಹ ಹಾಗೂ ಮಳೆಯಿಂದಾಗಿ 52 ಮಂದಿ ಸಾವಿಗೀಡಾಗಿದ್ದಾರೆ. ಎಲ್ಲರ ಕುಟುಂಬಗಳಿಗೂ ಪರಿಹಾರ ವಿತರಿಸಲಾಗಿದೆ. ರಾಜ್ಯದಲ್ಲಿ ಒಟ್ಟು 422 ಜಾನುವಾರುಗಳು ಮೃತಪಟ್ಟಿದ್ದು, ಅವರ ಮಾಲೀಕರಿಗೂ ಪರಿಹಾರ ನೀಡಲಾಗಿದೆ.

ಮನೆ ಮತ್ತು ಆಸ್ತಿ ಹಾನಿ:

547 ಮನೆಗಳು ಸಂಪೂರ್ಣ ಹಾನಿಗೊಳಗಾಗಿ ತಲಾ ₹1.20 ಲಕ್ಷ ಪರಿಹಾರ ನೀಡಲಾಗಿದೆ. ಭಾಗಶಃ ಹಾನಿಗೊಂಡ ಸಾವಿರಾರು ಮನೆಗಳಿಗೆ ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ಪರಿಹಾರ ವಿತರಣೆ ನಡೆದಿದೆ. ಬಟ್ಟೆ ಹಾಗೂ ಗೃಹೋಪಯೋಗಿ ವಸ್ತು ಕಳೆದುಕೊಂಡ 4,858 ಕುಟುಂಬಗಳಿಗೆ ₹2.42 ಕೋಟಿ ನೆರವು ಒದಗಿಸಲಾಗಿದೆ. ರಸ್ತೆ, ಸೇತುವೆ ಸೇರಿದಂತೆ ಮೂಲಸೌಕರ್ಯ ಹಾನಿ ಸಮೀಕ್ಷೆ ಮುಂದುವರಿದಿದೆ ಎಂದು ತಿಳಿಸಿದರು.

ಪ್ರವಾಹ ಪೀಡಿತ ಶಾಲೆಗಳ fitness ಪರೀಕ್ಷೆ ಕಡ್ಡಾಯ, ಸುರಕ್ಷತೆ ಇಲ್ಲದ ಶಾಲೆಗಳನ್ನು ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಗ್ರಾಮೀಣ ನೀರು ಸರಬರಾಜು ಹಾಗೂ ಆರೋಗ್ಯ ತಪಾಸಣೆ ಅಭಿಯಾನ ರೂಪದಲ್ಲಿ ನಡೆಸಲು ನಿರ್ದೇಶನ ನೀಡಿದರು.

ರೈತರ ಭೂಮಿಯ ಫಲವತ್ತತೆ ಕಳೆದುಹೋಗಿರುವುದರಿಂದ ಕೆರೆಗಳಿಂದ ಹೂಳು ತೆಗೆಯುವ ಮೂಲಕ ಮಣ್ಣು ಒದಗಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ಸಮೀಕ್ಷೆ ಪೂರ್ಣಗೊಂಡ ತಕ್ಷಣ ಪರಿಹಾರ ನೇರವಾಗಿ ರೈತರ ಖಾತೆಗೆ ಜಮಾ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande