ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕುರುಬ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರ್ಪಡೆ ಮಾಡಲು ಮುಂದಾಗಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡಿಸಿ ನಾಳೆ ಬೆಳಗ್ಗೆ ಬಳ್ಳಾರಿ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದು ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟ ತಿಳಿಸಿದೆ.
ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಜೋಳದರಾಶಿ ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಈ ಮಾಹಿತಿ ನೀಡಿ, ವಾಲ್ಮೀಕಿ ಗುರುಪೀಠದ ಸ್ವಾಮೀಜಿಗಳ ಆಶೀರ್ವಾದ ಪಡೆದು ಪ್ರತಿಭಟನೆಯನ್ನು ಏರ್ಪಡಿಸಲಾಗಿದೆ. ವಾಲ್ಮೀಕಿ ಸಮಾಜದ ಪ್ರತಿಯೊಬ್ಬರೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿಯ ಬಿ. ಶ್ರೀರಾಮುಲು, ಶಿವನಗೌಡ ನಾಯಕ್, ರಾಜೂ ಗೌಡ ಇನ್ನಿತರರು ಈ ಬಗ್ಗೆ ಧ್ವನಿ ಎತ್ತಬೇಕು. ಕಾಂಗ್ರೆಸ್ ಸಂಸದ ಈ. ತುಕಾರಾಂ ಹಾಗೂ ಬಿಜೆಪಿಯ ಬಂಗಾರು ಹನುಮಂತು ಅವರು ಒಟ್ಟಾಗಿ ಪ್ರತಿಭಟಿಸಬೇಕು. ಸಮುದಾಯದವರು ಎಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೋಗಿ, ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡುವುದನ್ನು ಕೈಬಿಡಲು ಮನವಿ ಮಾಡಬೇಕು ಎಂದರು.
ಮುಖಂಡರಾದ ನ್ಯಾಯವಾದಿ ಜಯರಾಂ, ಜನಾರ್ಧನ್ ನಾಯಕ್, ರುದ್ರಪ್ಪ, ರೂಪನಗುಡಿ ಗೋವಿಂದಪ್ಪ, ಪುಷ್ಪಲತಾ, ಸತ್ಯನಾರಾಯಣ ಇತರರಿದ್ದರು.
ಪ್ರತಿಭಟನೆಯು ಕಾಗೆ ಪಾರ್ಕ್‍ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಪ್ರತಿಭಟನೆ ನಾಳೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್