ಸಿಂಧನೂರು, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸಿಂಧನೂರು ತಾಲೂಕಾಡಳಿತ, ತಾಲೂಕ ಪಂಚಾಯಿತಿ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಿಂಧನೂರು ದಸರಾ ಉತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಮ್ಮ ಸಿಂಧನೂರು ಗ್ರಾಮೀಣ ದಸರಾ ಮತ್ತು ಅಂಬಾದೇವಿ ನವರಾತ್ರಿ ದಸರಾ ಉತ್ಸವ ಉದ್ಘಾಟನೆ ಮತ್ತು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ಸಿಕ್ಕಿತು.
ಕಾರ್ಯಕ್ರಮ ಹಿನ್ನೆಲೆಯಲ್ಲಿ ಸೋಮಲಾಪುರದ ಶ್ರೀ ಕ್ಷೇತ್ರ ಸಿದ್ಧಪರ್ವತ ಅಂಬಾಮಠದ ಆವರಣವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಪೂರ್ಣ ಕುಂಭ-ಕಳಸ ಮತ್ತು ಆಕರ್ಷಕ ಕಲಾ ತಂಡಗಳಿ0ದ ಅದ್ದೂರಿ ಸ್ವಾಗತ ಕೋರಲಾಯಿತು.
ಕಾರ್ಯಕ್ರಮದ ಅಂಗವಾಗಿ ಸೋಮಲಾಪುರದ ಕೆ.ಪಿ.ಎಸ್.ಶಾಲೆ ಹತ್ತಿರದ ಕಟ್ಟೆ ಬಸವಣ್ಣ ದೇವಸ್ಥಾನದಿಂದ ಅಂಬಾದೇವಿ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಹಸಿರು ದಸರಾ ಕಾರ್ಯಕ್ರಮದಡಿ ಸಸಿ ನೆಟ್ಟರು.
ಸಚಿವರಿಂದ ಚಾಲನೆ: ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ಯಮಗಳ ಇಲಾಖೆಯ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಉತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ನಾಡಹಬ್ಬ ದಸರಾ ಭಕ್ತಿ ಭಾವದ ಪ್ರತೀಕವಾಗಿದೆ. ಸಿಂಧನೂರ ಸೇರಿದಂತೆ ರಾಯಚೂರು ಮತ್ತು ಕೊಪ್ಪಳ ಜನರಿಗೆ ಹಬ್ಬದ ಸಂಭ್ರಮ ನೀಡಲು ಶಾಸಕರಾದ ಹಂಪನಗೌಡ ಬಾದರ್ಲಿ ಅವರು ತಾಲೂಕಾಡಳಿತದಿಂದ ದಸರಾ ಉತ್ಸವ ಆಯೋಜನೆ ಮಾಡಿದ್ದು ಶ್ಲಾಘನೀಯ ಕಾರ್ಯ ಎಂದರು.
ಕೊಪ್ಪಳ ಲೋಕಸಭಾ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಅವರು ಮಾತನಾಡಿ, ದಸರಾ ನಾಡಿನ ಹೆಮ್ಮೆಯ ಹಬ್ಬವಾಗಿದ್ದು, ಐತಿಹಾಸಿಕ ಹಿರಿಮೆಯನ್ನು ಪ್ರತಿಬಿಂಬಿಸುತ್ತದೆ. ರಾಯಚೂರು ಮತ್ತು ಕೊಪ್ಪಳ ಜನತೆಗೆ ಮಹಾನ್ ದಸರಾ ಹಬ್ಬದ ಸವಿ ಉಣಬಡಿಸುತ್ತಿರುವ ಸಿಂಧನೂರ ಶಾಸಕರ ಕಾರ್ಯ ಮಾದರಿಯಾಗಿದೆ ಎಂದು ತಿಳಿಸಿದರು.
ಮಾಜಿ ಸಂಸದರು ಹಾಗೂ ಸಿಂಧನೂರು ದಸರಾ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೆ. ವಿರುಪಾಕ್ಷಪ್ಪ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಇಂದು ಮರೆಯಾಗುತ್ತಿವೆ. ಗ್ರಾಮೀಣ ಕ್ರೀಡೆಗಳಿಗೆ ಜೀವ ತುಂಬಲು ಮತ್ತು ಕೃಷಿಕರ ಜೀವನ ಸುಖಮಯಗೊಳಿಸುವ ನಿಟ್ಟಿನಲ್ಲಿ ದಸರಾ ಉತ್ಸವದಲ್ಲಿ ಕ್ರೀಡೆ ಸೇರಿದಂತೆ ಉತ್ತಮ ಕಾರ್ಯಕ್ರಮ ರೂಪಿಸಿ ಉತ್ಸವವನ್ನು ಜನಪರವಾಗಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ವೆಂಕನಗೌಡ (ಬಾಬುಗೌಡ) ಬಾದರ್ಲಿ, ಸೋಮಲಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರೇಣುಕಮ್ಮ ಗಂ. ಹುಸೇನಪ್ಪ ಮಲ್ಕಾಪುರ, ಅಂಬಾಮಠ ಕಮಿಟಿಯ ಅಧ್ಯಕ್ಷರಾದ ರಂಗನಗೌಡ ಗೊರೇಬಾಳ, ಮುಖಂಡರಾದ ಬಸವರಾಜ ಹಿರೇಗೌಡರ್, ಶ್ರೀದೇವಿ ಶ್ರೀನಿವಾಸ, ತಹಸೀಲ್ದಾರ ಅರುಣಕುಮಾರ ದೇಸಾಯಿ, ತಾಲೂಕು ಪಂಚಾಯತ್ ಇಓ ಚಂದ್ರಶೇಖರ ಸೇರಿದಂತೆ ಇತರರು ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಸರಿಗಮಪ ಖ್ಯಾತಿಯ ಜ್ಞಾನೇಶ, ಶಿವಾನಿ, ಭೂಮಿಕಾ ಮತ್ತು ತಂಡದವರಿ0ದ ನಾನಾ ಗೀತೆಗಳು, ಕೊತಬಾಳದ ಅರುಣೋದಯ ಸಾಂಸ್ಕೃತಿಕ ಕಲಾ ತಂಡದಿ0ದ ಜೋಗತಿ ನೃತ್ಯ, ಕೊಪ್ಪಳದ ರಂಗಧಾರ ರೇಪರ್ಟರಿ ತಂಡದಿ0ದ ಶಿಕ್ಷಣ, ಆರೋಗ್ಯ, ಕೃಷಿಗೆ ಸಂಬ0ಧಿಸಿದ0ತೆ ಜಾಗೃತಿ ರೂಪಕ ನಾಟಕಗಳು, ಗ್ರಾಮೀಣ ಕಲಾ ತಂಡಗಳಿ0ದ ಕಲೆ-ಸಂಸ್ಕೃತಿ-ಜನಪದ ಕಾರ್ಯಕ್ರಮಗಳು ಹಾಗೂ ಕಾಲೇಜು ತಂಡಗಳಿ0ದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ದೇವಿ ಮೂರ್ತಿ ಪ್ರತಿಷ್ಠಾಪನೆ: ಸಂಜೆ ವೇಳೆಯಲ್ಲಿ ಸಿಂಧನೂರಿನ ದಸರಾ ಉತ್ಸವ ವೇದಿಕೆಯ ಹತ್ತಿರ ಶ್ರೀ ದೇವಿ ಮೂರ್ತಿಯನ್ನು ವೇ.ಮೂ. ಅಮರಯ್ಯಸ್ವಾಮಿ ಹಿರೇಮಠ, ಅಲಬನೂರು ಇವರಿಂದ ಪ್ರತಿಷ್ಠಾಪನೆ ಮಾಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್