ರಾಯಚೂರು, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅರೆ ಕಾನೂನು ಸ್ವಯಂ ಸೇವಕರ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತರು ಮುಂದೆ ಬರಬೇಕು ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ನ್ಯಾ. ಶಶಿಧರ್ ಶೆಟ್ಟಿ ಅವರು ತಿಳಿಸಿದ್ದಾರೆ.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಚೇರಿ ಬೆಂಗಳೂರಿನಿ0ದ ರಾಜ್ಯದ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯ ಸದಸ್ಯ ಕಾರ್ಯದರ್ಶಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೆ.23ರಂದು ಆನ್‌ಲೈನ್ ಸಭೆ ನಡೆಸಿ ಅವರು ಮಾತನಾಡಿದರು.
ಜನರ ಸಮಸ್ಯೆ ತಿಳಿಯಲು ಮತ್ತು ಸರ್ಕಾರದ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಅರೆ ಕಾನೂನು ಸ್ವಯಂ ಸೇವಕರ ಪಾತ್ರ ಬಹಳ ಮುಖ್ಯವಾಗಿದೆ.
ಹಾಗಾಗಿ ರಾಜ್ಯದ ಎಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಅರೆ ಕಾಲಿಕ ಸ್ವಯಂ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕೆ ಯಾವುದೇ ಸಂಬಳ ಇರುವುದಿಲ್ಲ. ಅಕ್ಟೋಬರ್ 20 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ ಎಂದರು.
ನಿವೃತ್ತ ಶಿಕ್ಷಕರು, ಮಾಜಿ ಪಂಚಾಯತ ಸದಸ್ಯರು, ನಿವೃತ್ತ ಸರಕಾರಿ ನೌಕರರು, ತೃತೀಯ ಲಿಂಗಿಗಳು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಕಾನೂನು ವಿಧ್ಯಾರ್ಥಿಗಳು, ಮಹಿಳಾ ಸಂಘಗಳ ಸದಸ್ಯರು, ನಿವೃತ್ತ ಸೈನಿಕರು ಸೇರಿದಂತೆ ಇತರರು ಅರೆ ಕಾನೂನು ಸ್ವಯಂ ಸೇವಕರ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದರು.
ಬಹುತೇಕ ಹಳ್ಳಿಯ ಜನತೆಗೆ ಜನನ ಮರಣ ನೋಂದಣಿ ಮಾಡಿಸಬೇಕೆಂಬ ಮಾಹಿತಿ ಇರುವುದಿಲ್ಲ. ಮಕ್ಕಳು ಕಳೆದಾಗ ತಕ್ಷಣ ಮಕ್ಕಳ ರಕ್ಷಣಾ ಇಲಾಖೆಗೆ ಅಥವಾ ಪೊಲೀಸರಿಗೆ ತಿಳಿಸಿದಲ್ಲಿ ಬೇಗನೆ ಪತ್ತೆ ಹಚ್ಚಲು ಅನುಕೂಲವಾಗುತ್ತದೆ. ಕೆಲ ಪ್ರಕರಣಗಳಲ್ಲಿ ಮಾನಸಿಕ ಅಸ್ವಸ್ಥರನ್ನು ಮನೆಯಲ್ಲಿ ಕೂಡಿ ಹಾಕಿರುತ್ತಾರೆ. ಅಂತಹವರನ್ನು ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಅರೆ ಕಾನೂನು ಸ್ವಯಂ ಸೇವಕರ ಮೂಲಕ ಮಾಹಿತಿ ಪಡೆದು ಅವರಿಗೆ ರಕ್ಷಣೆ ಮಾಡಲಾಗುತ್ತದೆ. ವಿಶೇಷವಾಗಿ ಹಳ್ಳಿಯ ಜನರಿಗೆ ಮಾಹಿತಿ ಒದಗಿಸುವ ಮಹತ್ವದ ಕಾರ್ಯವನ್ನು ಅರೆ ಕಾನೂನು ಸ್ವಯಂ ಸೇವಕರು ಮಾಡಬೇಕಾಗುತ್ತದೆ ಎಂದರು.
ಹಳ್ಳಿಗಳಲ್ಲಿ ಬಾಲ್ಯ ವಿವಾಹ ತಡೆಯುವ ಕಾರ್ಯ ಮಾಡಬೇಕಿದೆ. ಸಣ್ಣಪುಟ್ಟ ಕೌಟುಂಬಿಕ ಕಲಹ, ವಿಚಾರಕ್ಕೆ ಪೊಲೀಸ್, ಕೋರ್ಟ್ ಕಚೇರಿಯ ಮೆಟ್ಟಿಲೇರದೆ, ಇಬ್ಬರು ಸಮಕ್ಷಮ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಇಟ್ಟಂಗಿ ಭಟ್ಟಿ, ಅಗರಬತ್ತಿ ತಯಾರಿಕೆ ಕಾರ್ಖಾನೆ, ಹೋಟೆಲ್ ಸೇರಿದಂತೆ ಇತರೆ ಕಡೆಗಳಲ್ಲಿ ಕಂಡು ಬರುವ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಮುಖ್ಯವಾಹಿನಿಗೆ ತರಬೇಕಿದೆ. ಈ ಎಲ್ಲ ಕಾರ್ಯ ಮಾಡಲು ಆಸಕ್ತರು ಸ್ವಯಂ ಇಚ್ಚೆಯಿಂದ ಅರೇ ಕಾನೂನು ಸ್ವಯಂ ಸೇವಕರ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಆನಲೈನ್ ಸಭೆಯಲ್ಲಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎ.ಸಾತ್ವಿಕ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು ಕಚೇರಿಯ ಶ್ರೀಧರ್, ಬಾಲಸುಬ್ರಹ್ಮಣ್ಯಂ ಹಾಗೂ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್