ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅರೆಕಾಲಿಕ ಕಾನೂನು ಸ್ವಯಂ ಸೇವಕರು (ಪ್ಯಾರಾ ಲೀಗಲ್ ವ್ಯಾಲೆಂಟಿರ‍್ಸ್) ಎಂದರೆ ಸಮಾಜದಲ್ಲಿ ಕಾನೂನು ಅರಿವು ಮೂಡಿಸಲು, ಕಾನೂನು ನೆರವು ಪಡೆಯಲು ಜನರಿಗೆ ಸಹಾಯ ಮಾಡಲು ಮತ್ತು ಸಾಮಾನ್ಯ ಜನರು ಹಾಗೂ ಕಾನೂನು ಸೇವಾ ಸಂಸ್ಥೆಗಳ ನಡುವೆ ಅಂತರವನ್ನು ಕಡಿಮೆ ಮಾಡಲು ಕೆಲಸ ಮಾಡುವ ಸ್ವಯಂಸೇವಕರು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ್ ಶೆಟ್ಟಿ ಅವರು ತಿಳಿಸಿದ್ದಾರೆ.
ಎಲ್ಲಾ ಜಿಲ್ಲೆಯ ಕಾನೂನು ಸೇವೆಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಮಾಧ್ಯಮದವರೊಂದಿಗೆ ವರ್ಚುವಲ್ ಮೂಲಕ ಸಂವಾದ ನಡೆಸಿ ಅವರು ಮಾತನಾಡಿದರು.
ಅರೆಕಾಲಿಕ ಕಾನೂನು ಸ್ವಯಂ ಸೇವಕರರು ಇವರು ವಕೀಲರಲ್ಲದಿದ್ದರೂ, ಸಮಾಜದಲ್ಲಿ ಕಾನೂನು ಸೇವೆಗಳನ್ನು ತಲುಪಿಸಲು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಜನರಿಗೆ ಕಾನೂನು ಅರಿವನ್ನು ಮೂಡಿಸುವುದು. ಕಾನೂನು ನೆರವು ಪಡೆಯಲು ಜನರಿಗೆ ಸಹಾಯ ಮಾಡುವುದು. ನ್ಯಾಯದ ಪ್ರವೇಶಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವುದು. ಸಾಮಾನ್ಯ ಜನರು ಮತ್ತು ಕಾನೂನು ಸೇವಾ ಪ್ರಾಧಿಕಾರಗಳ ನಡುವಿನ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುವುದು ಇವರ ಕಾರ್ಯವಾಗಿದೆ ಎಂದರು.
ಸಾಮಾಜಿಕ ಚಿಂತನೆ ಮತ್ತು ಸಮಾಜ ಸೇವೆ ಮಾಡುವ ಇಚ್ಛೆ ಹೊಂದಿರುವ ಶಿಕ್ಷಕರು, ನಿವೃತ್ತ ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರು, ಹಿರಿಯ ನಾಗರಿಕರು, ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು, ಕಾನೂನು ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಂಘ-ಸAಸ್ಥೆಗಳ ಸದಸ್ಯರು, ಸ್ತ್ರೀ ಶಕ್ತಿ ಸಂಘಗಳು, ಸ್ತ್ರೀ ಮೈತ್ರಿ ಸಂಘಗಳು, ಪದವೀಧರರು ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿರುವವರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಆಯಾ ಜಿಲ್ಲಾ ಅಥವಾ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅ.20 ರೊಳಗೆ ಅರ್ಜಿ ಸಲ್ಲಿಸಬಹುದು. ಸಹಾಯವಾಣಿ ಸಂಖ್ಯೆ 15100 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದ್ದು, ಈ ಸ್ವಯಂ ಸೇವಕರಿಗೆ ಕಾನೂನು ತರಬೇತಿಯನ್ನು ನೀಡಿ ಒಟ್ಟಾರೆಯಾಗಿ, ನ್ಯಾಯವನ್ನು ಎಲ್ಲರಿಗೂ ತಲುಪಿಸುವ ಒಂದು ಪ್ರಮುಖ ಕಾರ್ಯವಾಗಲಿದೆ. ಇದರ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕಾಗಿ ಮಾಧ್ಯಮ ಸಂಸ್ಥೆಗಳಿಗೆ ಮನವಿ ಮಾಡಿದರು.
ವರ್ಚುವಲ್ ಮೂಲಕ ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್