ಕೋಲಾರ, ೨೪ ಸೆಪ್ಟಂಬರ್ (ಹಿ.ಸ.) :
ಆ್ಯಂಕರ್ : ಕೆಸಿ ವ್ಯಾಲಿಯಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ನಿಗಧಿತ ಒಪ್ಪಂದದಂತೆ ೪೪೦ ಎಂಎಲ್ಡಿ ನೀರು ಹರಿಯಲಿದ್ದು, ಜಿಲ್ಲೆಯ ೬ ತಾಲ್ಲೂಕುಗಳ ಕೆರೆಗಳಿಗೂ ನೀರು ತುಂಬಲಿದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್ ತಿಳಿಸಿದರು.
ಕೋಲಾರ ನಗರದ ಕೋಲಾರಮ್ಮ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ತಾಯಿಗೆ ಅಂಭಾಭವಾನಿ ಅಲಂಕಾರ ಮಾಡಿದ್ದು, ಪೂಜೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.
ರಾಜಕೀಯವಾಗಿ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ ಅವರು, ನಾನು ಮೌನಕ್ಕೆ ಜಾರಿದ್ದೇನೆ, ಹರಳುಕುಂಟೆ ಶಶಿಕುಮಾರ್ ಕುಟುಂಬದವರು ಕೋಲಾರಮ್ಮ ದೇವಿಗೆ ಪೂಜೆ ಮಾಡಿಸುತ್ತಿರುವುದಾಗಿ ತಿಳಿಸಿ ಬರಲು ಹೇಳಿದ್ದರು, ತಾಯಿಯ ದರ್ಶನಕ್ಕೆ ಬಂದಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ರಾಮಸಾಗರ ಸಮೀಪ ಕೆಸಿ ವ್ಯಾಲಿಗೆ ಭೇಟಿ ನೀಡಲಿದ್ದೇನೆ, ನೀರಿನ ಹರಿವು ಪರಿಶೀಲನೆ ನಡೆಸುವುದಾಗಿ ತಿಳಿಸಿದ ಅವರು, ೨೦೨೩ರ ಚುನಾವಣೆ ಸಂದರ್ಭದಲ್ಲಿ ೩೦೦ ಎಂಎಲ್ಡಿ ನೀರು ಕೆಸಿ ವ್ಯಾಲಿಯಲ್ಲಿ ಹರಿಯುತ್ತಿತ್ತು ಆದರೆ ನಂತರ ಈ ಎರಡು ವರ್ಷ ನೀರು ಹರಿಯಲಿಲ್ಲ, ಅದಕ್ಕೆ ಕಾರಣವೂ ತಿಳಿಯಲಿಲ್ಲ ಎಂದರು.
ಕೋಲಾರ ಜಿಲ್ಲೆಯ ಭಗೀರಥರಾಗಿ ತಾವೇ ಸರ್ಕಾರದ ಮೇಲೆ ಒತ್ತಡ ತಂದು ಅನುಷ್ಟಾನಗೊಳಿಸಿದ ಕೆಸಿ ವ್ಯಾಲಿ ನೀರು ನಿಲ್ಲಲು ಕಾರಣವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನ ಜನರೇನು ಸ್ನಾನ ನಿಲ್ಲಿಸಿದ್ದಾರೆಯೇ ಇಲ್ಲವಲ್ಲ ಆದರೂ ನೀರು ಏಕೆ ಹರಿಯಲಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀನಿವಾಸಪುರ ಕಸಬಾ ಹೋಬಳಿಯ ಹಲವಾರು ಕೆರೆಗಳು ಒಣಗಿ ಹೋಗಿದ್ದರಿಂದ ಬೇಸರವಾಯಿತು. ಕೂಡಲೇ ನೀರು ನಿಂತಿರುವ ಕುರಿತು ಸಿಎಂ ಗಮನಕ್ಕೆ ತಂದೆ, ಒತ್ತಡ ಹಾಕಿದ್ದ ರಿಂದಾಗಿ ಸಣ್ಣನೀರಾವರಿ ಸಚಿವರು, ಕಂದಾಯ ಸಚಿವ ಕೃಷ್ಣಬೈರೇಗೌಡ, ಸಚಿವ ಸುಧಾಕರ್, ನಸೀರ್ ಅಹಮದ್ ಮತ್ತಿತರರನ್ನೊಳಗೊಂಡಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ೨ ಸಭೆ ನಡೆಸಿ ಅಧಿಕಾರಿಗಳಿಗೆ ನೀರು ಹರಿಸಲು ತಾಕೀತು ಮಾಡುವಂತೆ ಕ್ರಮವಹಿಸಿದೆ ಎಂದರು.
ಇದರಿಂದಾಗಿ ಈಗ ೩೩೦ ಎಂಎಲ್ಡಿ ವರೆಗೂ ನೀರು ಹರಿಯುತ್ತಿದೆ, ಸ್ವಲ್ಪ ನೆಮ್ಮದಿ ಮೂಡಿದೆ ಎಂದ ಅವರು, ಸಣ್ಣನೀರಾವರಿ ಇಲಾಖೆ ಹಾಗೂ ಬೆಂಗಳೂರು ಜಲಮಂಡಳಿ ನಡುವೆ ಆಗಿರುವ ಒಪ್ಪಂದದಂತೆ ಈಗಾಗಲೇ ೪೪೦ಎಂಎಲ್ಡಿ ನೀರು ಹರಿಯಬೇಕಾಗಿತ್ತು ಆದರೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈಗ ಸಿಎಂ ಕಡೆಯಿಂದ ಸ್ಪಷ್ಟ ಸೂಚನೆ ಕೊಡಿಸಿದ್ದೇನೆ, ಮತ್ತೊಂದು ಶುದ್ದೀಕರಣ ಘಟಕ ಸಿದ್ದಗೊಂಡ ನಂತರ ಡಿಸೆಂಬರ್ ಅಂತ್ಯ ಅಥವಾ ಜನವರಿ ಆರಂಭದೊಳಗೆ ನಿಗಧಿಯಾಗಿರುವಂತೆ ೪೪೦ ಎಂಎಲ್ಡಿ ನೀರು ಹರಿಯಲಿದೆ ಎಂದರು.
ಕೆಲವರು ೩ನೇ ಹಂತದ ಶುದ್ದೀಕರಣವಾಗು ವವರೆಗೂ ನೀರು ಬೇಡ ಎನ್ನುತ್ತಿರುವ ಕುರಿತು ಗಮನಕ್ಕೆ ತಂದಾಗ ಅಂತಹವರ ಕುರತು ನಾನು ಮಾತನಾಡುವುದಿಲ್ಲ, ಯಾರಿಗೆ ನೀರು ಬೇಕೋ ಅವರು ಬಳಸಿಕೊಳ್ಳುತ್ತಾರೆ, ಬೇಡವೆನ್ನುವರು ಇದ್ದರೆ ಇರಲಿ ಎಂದು ತಿಳಿಸಿದರು.
ಇದಾದ ನಂತರ ತಾಲ್ಲೂಕಿನ ರಾಮಸಾಗರ ಸಮೀಪದ ಕೆಸಿ ವ್ಯಾಲಿ ನೀರು ಜಿಲ್ಲೆಗೆ ಪ್ರವೇಶಿಸುವ ಜಾಗ ವೀಕ್ಷಿಸಿ ನೀರು ಹರಿಯುತ್ತಿರುವ ಪ್ರಮಾಣದ ಕುರಿತು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸಿಎಂ.ಮುನಿಯಪ್ಪ, ನಗರಸಭಾ ಸದಸ್ಯ ಅಂಬರೀಷ್, ಕಠಾರಿಪಾಳ್ಯ ಗಂಗಣ್ಣ, ಚಿಕ್ಕಿ, ಅಬ್ದುಲ್ ಖಯ್ಯೂಂ, ಷಂಷೀರ್, ನಗರಸದಸ್ಯ ಅಪ್ಸರ್, ಏಜಾಜ್ ಪಾಷಾ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್, ನಾಮಿನಿ ಸದಸ್ಯ ಅಮರನಾಥ್, ಚಿಟ್ಟಿ ರಘು, ಕುಡುವನಹಳ್ಳಿ ಆನಂದ್, ನರೇಶ್,ರವಿ, ಯಾದವ ಸಂಘದ ಪ್ರಧಾನಕಾರ್ಯದರ್ಶಿ ನಾಗರಾಜ್, ಬಾಲಗೋವಿಂದ್, ಶ್ರೀನಿವಾಸಪುರ ನಗರಸಭಾ ಮಾಜಿ ಸದಸ್ಯ ಪ್ರಕಾಶ್, ಸವಿತಾ ಸಮಾಜ ಮಂಜುನಾಥ್, ಶಿಕ್ಷಣ ಸುಧಾರಣಾ ಸಮಿತಿ ನಾಮಿನಿ ಸದಸ್ಯ ಕಠಾರಿಪಾಳ್ಯ ಬಾಲು, ಗಾಂಧಿನಗರ ಕಾರ್ತಿಕ್, ರವಿಚಂದ್ರ, ಅಶೋಕ್, ಜಫುರುಲ್ಲಾ ಮತ್ತಿತರರಿದ್ದರು.
ಚಿತ್ರ ; ಕೋಲಾರ ನಗರದ ಕೋಲಾರಮ್ಮ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ತಾಯಿಗೆ ಅಂಭಾಭವಾನಿ ಅಲಂಕಾರ ಮಾಡಿದ್ದು, ಮಾಜಿ ಶಾಸಕ ರಮೇಶ್ ಕುಮಾರ್ ಪೂಜೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್