ರಾಯಚೂರು, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕಾರ್ಮಿಕರು ಇಲಾಖೆಯಿಂದ ದೊರೆಯುವ ಸವಲತ್ತಿನ ಸದ್ಬಳಕೆ ಜತೆಗೆ ಕಾನೂನಿನ ಅರಿವು ಪಡೆಯಬೇಕು ಎಂದು ಗೌರವಾನ್ವಿತ ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎ.ಸಾತ್ವಿಕ್ ಅವರು ಹೇಳಿದರು.
ಬುಧವಾರ ನಗರದ ಕರ್ನಾಟಕ ರಾಜ್ಯ ನೌಕರರ ಜಿಲ್ಲಾ ಸಂಘದ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕಾರ್ಮಿಕ ಇಲಾಖೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಯೋಜನೆ ಹಾಗೂ ಸೌಲಭ್ಯಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಗುರುತಿನ ಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಮಿಕರು ಸಂಘಟಿತರಾಗಿ ತಮಗೆ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಕನಿಷ್ಟ ವೇತನ ಕಾಯಿದೆ ಹಾಗೂ ಇನ್ನಿತರ ಕಾಯಿದೆಗಳಿಂದ ದೊರೆಯವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ದೇಶದಲ್ಲಿ ಹಲವಾರು ಕಾನೂನುಗಳಿದ್ದು, ಕಾರ್ಮಿಕರು ತಮಗೆ ಬೇಕಾದ ಕಾನೂನುಗಳನ್ನು ಅರಿಯಬೇಕು. ಜಿಲ್ಲಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ನೀಡಲಾಗುತ್ತಿದ್ದು, ಕಾರ್ಮಿಕರು ಅದರ ಸದುಪಯೋಗ ಪಡೆಯಬೇಕು. ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ವಕೀಲರನ್ನು ನೀಡಲಾಗುತ್ತದೆ ಎಂದರು.
ಯಾವುದೇ ಕಾರ್ಖಾನೆ ಅಭಿವೃದ್ಧಿಯಾಗಬೇಕಾದಲ್ಲಿ ಕಾರ್ಮಿಕರ ಶ್ರಮವು ಅತ್ಯಗತ್ಯವಾರುತ್ತದೆ. ಇದನ್ನು ಮಾಲೀಕರು ಅರಿತು ಕಾರ್ಮಿಕರಿಗೆ ಸರಿಯಾದ ಸೌಕರ್ಯ ನೀಡಬೇಕು. ಅವರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಆರತಿ ಅವರು ಮಾತನಾಡಿ, ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿ0ದ ಶೆಕ್ಷಣಿಕ ಸಹಾಯಧನ, ವೆದ್ಯಕೀಯ ಸಹಾಯಧನ, ಹೆರಿಗೆ ಸಹಾಯಧನ ಹಾಗೂ ಇತರೆ ಸಹಾಯಧನಗಳನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದರ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಕಾರ್ಮಿಕರಿಗೆ ಸಲಹೆ ನೀಡಿದರು.
ಯೋಜನೆಗಳ ಸೌಲಭ್ಯ : ಜಿಲ್ಲಾ ಕಾರ್ಮಿಕ ಇಲಾಖೆಯಿಂದ ಜಿಲ್ಲೆಯ ಕಾರ್ಮಿಕರು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿ0ದ ವಿವಿಧ ಯೋಜನೆಗಳಾದ ಇ- ಶ್ರಮ ಯೋಜನೆಯಡಿಯಲ್ಲಿ 4,32,405, ಪ್ರಧಾನಮಂತ್ರಿ ಶ್ರಮಯೋಗಿ ಮಾನ್- ಧನ್ ಯೋಜನೆಯಡಿ 4,661, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 2685 ಸೇರಿದಂತೆ ಒಟ್ಟು 5,14,749 ಫಲಾನುಭವಿಗಳು ನೋಂದಣಿಯಾಗಿದ್ದಾರೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿ0ದ ಮದುವೆ ಧನ ಸಹಾಯ 571, ಪ್ರಮುಖ ವೈದ್ಯಕೀಯ 32, ಹೆರಿಗೆ ಧನ ಸಹಾಯ 150, ತಾಯಿ ಮಗು ಸಹಾಯ ಹಸ್ತದಡಿ 79 ಫಲಾನುಭವಿಗಳು ಸೌಲಭ್ಯ ಪಡೆದಿದ್ದು, 4,44,54,657 ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಆರತಿ ಅವರು ಉಪನ್ಯಾಸದಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ನಜೀರ್ ಮಹಮ್ಮದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶರಣಮ್ಮ, ರಾಯಚೂರಿನ 1 ಹಾಗೂ 2ನೇ ವೃತ್ತದ ಕಾರ್ಮಿಕ ನಿರೀಕ್ಷಕರಾದ ಪ್ರಿಯಾಂಕ, ಕಾರ್ಮಿಕ ಇಲಾಖೆಯ ಎಕ್ಸಿಕ್ಯೂಟಿವ್ ಎನ್. ನಾಗರಾಜ, ಶ್ರೀಕಾಂತ್ ಸೇರಿದಂತೆ ಅಧಿಕಾರಿಗಳು ಹಾಗೂ ಕಾರ್ಮಿಕರು ಕಾರ್ಯಕ್ರಮದಲ್ಲಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್