ಬಳ್ಳಾರಿ, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕಲ್ಯಾಣಸ್ವಾಮಿ ಮಠದ ಪೂಜ್ಯರು ಜಾತ್ಯಾತೀತರು ಮತ್ತು ಪ್ರಗತಿಪರ ಚಿಂತಕರಾಗಿದ್ದು ಈ ಮಠವು ಸರ್ವಾಂಗೀಣವಾಗಿ ಅಭಿವೃದ್ಧಿ ಸಾಧಿಸಬೇಕು ಎಂದು ಪದ್ಮಶ್ರೀ ಪುರಸ್ಕøತ ಮಾತಾ ಜಿ. ಮಂಜಮ್ಮ ಜೋಗತಿ ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಮಹಾಸ್ವಾಮಿಗಳು ಶ್ರೀಮಠದಲ್ಲಿ ಏರ್ಪಡಿಸಿರುವ ದಸರಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಳ್ಳಾರಿ ಮತ್ತು ನಾಡಿನ ಹಿತ, ಭಕ್ತರ ಹಿತವನ್ನು ಕಾಪಾಡುವಲ್ಲಿ ಕಲ್ಯಾಣ ಶ್ರೀಗಳು ಸದಾ ಸಹಕಾರ ನೀಡುತ್ತಿದ್ದಾರೆ. ಕಲೆ, ಸಾಹಿತ್ಯ, ಕ್ರೀಡೆ, ಸಂಘಟನೆ, ಸಮಾಜ ಇನ್ನಿತರೆ ಕ್ಷೇತ್ರಗಳಲ್ಲಿ ಅವಿರತ ಶ್ರಮಿಸುತ್ತಿದ್ದಾರೆ ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಡಾ. ಕಣೇಕಲ್ಲು ಮಹಾಂತೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ನಗರ ಶಾಸಕ ನಾರಾ ಭರತರೆಡ್ಡಿ ಅವರು ಮುಖ್ಯ ಅತಿಥಿಗಳಾಗಿದ್ದರು.
ಬಿಜೆಪಿ ಮುಖಂಡ ಕೆ.ಎ. ರಾಮಲಿಂಗಪ್ಪ, ವೀರಶೈವ ಲಿಂಗಾಯಿತ ಮುಖಂಡರಾದ ಚಾನಾಳ್ ಶೇಖರ್, ಕೋರಿ ವಿರುಪಾಕ್ಷಪ್ಪ, ಮಹಾನಗರ ಪಾಲಿಕೆ ಸದಸ್ಯ ಜಬ್ಬರ್ ಸಾಬ್, ರೈತ ಮುಖಂಡ ದರೂರು ಪುರುಷೋತ್ತಮ ಗೌಡ, ಶರಭಯ್ಯ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಠಾಧೀಶರ ಧರ್ಮ ಪರಿಷತ್‍ನ ನಂದೀಪುರ ಡಾ. ಮಹೇಶ್ವರ ಮಹಾಸ್ವಾಮಿಗಳು, ಹರಗಿನಡೋಣಿ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಉರಗೊಳದ ಮಹಾಂತಸ್ವಾಮಿಗಳು, ಗುರುಲಿಂಗ ಶಿವಚಾರ್ಯ ಮಹಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿದ್ದರು.
ಶ್ರೀಮತಿ ಶಿಲ್ಪ ಜಡೇಶ್ ಅವರು ಪ್ರಾರ್ಥನೆ ಸಲ್ಲಿಸಿದರು. ಶಿಕ್ಷಕಿ ವಸುಧ ಧಾರವಾರ್ ಮತ್ತು ವಕೀಲ ಮೃತುಂಜಯ ಬಂಡ್ರಾಳ ಅವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಹೇಮಾವತಿ ಮತ್ತು ಅವರ ಶಿಷ್ಯವರ್ಗ ಭರತನಾಟ್ಯ ಪ್ರದರ್ಶನ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್