ವಿಜಯಪುರ, 21 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ಮಹಿಳೆಯರು ತಮಗೆ ಸಿಗುವ ಅವಕಾಶಗಳನ್ನು ಜಾಣ್ಮೆಯಿಂದ ಸದುಪಯೋಗ ಪಡಿಸಿಕೊಂಡು ಎಲ್ಲ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಇಂದು ರವಿವಾರ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಎಲ್. ಟಿ.- 1ರಲ್ಲಿ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ರೂ. 996 ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ವಿದ್ಯಾರ್ಥಿನಿಯರೊಂದಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿಯೇ ಬಸವಣ್ಣನವರು ಮಹಿಳೆಯರ ಸಮಾನತೆ ಪ್ರತಿಪಾದಿಸಿದ್ದರು. ಇಂದು ಹೆಣ್ಣು ಮಕ್ಕಳಿಗೆ ಶಿಕ್ಷಣ ಶೇ. 100 ಶಿಕ್ಷಣ ನೀಡುವುದು ಪೋಷಕರ ಜವಾಬ್ದಾರಿ. ಮಹಿಳೆಯರ ಶಿಕ್ಷಣಕ್ಕೆ ಸರಕಾರ ಸಕಲ ರೀತಿಯಿಂದ ನೆರವು ನೀಡುತ್ತಿದೆ. ಅವರಿ ಶಿಕ್ಷಣ ನೀಡಿದರೆ ಅವರು ಸಂಪೂರ್ಣವಾಗಿ ಆಸ್ಥೆವಹಿಸಿ ಕಲಿಯುತ್ತಾರೆ. ತಮಗೆ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ವೃತ್ತಿಪರರಾಗುತ್ತಾರೆ. ಈ ಮೂಲಕ ಇತರರಿಗೂ ಮಾದರಿಯಾಗುತ್ತಾರೆ. ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ ಇದಕ್ಕೆ ಉದಾಹರಣೆಯಾಗಿದ್ದಾರೆ ಎಂದು ಅವರು ಹೇಳಿದರು.
ಅರಕೇರಿಯ ಈ ಶಾಲೆಯ ವಿದ್ಯಾರ್ಥಿನಿಯರು ರಾಜ್ಯದ ವಸತಿ ಶಾಲೆಗಳಲ್ಲಿಯೇ ಸಾಧನೆಯ ಮೂಲಕ ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ. ಇಲ್ಲಿನ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಸಿ.ಎಸ್.ಆರ್ ಅನುದಾನದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಅವರಿಗೆ ಶಕ್ತಿ ತುಂಬಲಾಗುವುದು. ಇಲ್ಲಿನ ಪ್ರತಿಭೆಗಳು ಕೂಡ ಸಾಧನೆ ಮೂಲಕ ಉನ್ನತ ಹುದ್ದೆಗಳಿಗೇರಲಿ ಎಂದು ಶುಭ ಹಾರೈಸಿದ ಸಚಿವರು ಈಗ ನಿರ್ಮಿಸಲಾಗುತ್ತಿರುವ ಕಟ್ಟಡ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಪ್ರಶಾಂತ ಪೂಜಾರಿ ಮಾತನಾಡಿ, ಇತ್ತೀಚೆಗೆ ನಡೆದ ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ ರಾಜ್ಯದ 157 ಇಂಥ ವಸತಿ ಶಾಲೆಗಳಲ್ಲಿ ಅರಕೇರಿ ಶಾಲೆಯ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ರಾಜ್ಯದ ಟಾಪ್ 10 ವಿದ್ಯಾರ್ಥಿನಿಯರಲ್ಲಿ 7 ವಿದ್ಯಾರ್ಥಿನಿಯರು ನಮ್ಮ ಶಾಲೆಯವರಿದ್ದಾರೆ. ಅವರಿಗೆ ಇಲಾಖೆ ವತಿಯಿಂದ ಸ್ಕೂಟಿ ದ್ವಿಚಕ್ರ ವಾಹನ ಪ್ರೋತ್ಸಾಹವಾಗಿ ನೀಡಲಾಗಿದೆ. ಅಲ್ಲದೇ, ಈ ಬಾರಿ ರಾಜ್ಯದ 10 ವಿದ್ಯಾರ್ಥಿಗಳ ಪೈಕಿ ನಮ್ಮ ಶಾಲೆಯ 5 ವಿದ್ಯಾರ್ಥಿನಿಯರಿಗೆ ಲ್ಯಾಪಟಾಟ್ ಬಹುಮಾನ ಬಂದಿದೆ. 2013ರಲ್ಲಿ ಪ್ರಾರಂಭವಾದ ಈ ವಸತಿ ಶಾಲೆ ಇಂದು ಈ ಸಾಧನೆ ಮಾಡಲು ಈ ಭಾಗದ ಶಾಸಕ ಮತ್ತು ಸಚಿವರಾದ ಎಂ. ಬಿ. ಪಾಟೀಲ ಅವರ ಕೊಡುಗೆ ಪ್ರಮುಖ ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರಕೇರಿ ಗ್ರಾ. ಪಂ. ಅಧ್ಯಕ್ಷೆ ಸುನಂದಾ ಬರಕಡೆ, ಮಾಜಿ ಅಧ್ಯಕ್ಷ ಪೀರ ಪಟೇಲ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಎಸ್. ಎಚ್. ನಾಡಗೌಡ, ಚನ್ನಪ್ಪ ದಳವಾಯಿ, ಅಶೋಕ ದಳವಾಯಿ, ಸೋಮನಿಂಗ ಕಟಾವಿ, ಸೋಮನಿಂಗ ಇಂಚಗೇರಿ, ಶ್ರೀಶೈಲ ದಳವಾಯಿ, ತಿಕೋಟಾ ತಹಸೀಲ್ದಾರ ಸುರೇಶ ಚವಲಾರ, ತಾ. ಪಂ. ಅಧಿಕಾರಿ ಬಸವಂತರಾಯ ಬಿರಾದಾರ, ಪ್ರಾಚಾರ್ಯ ಸಂಗಮೇಶ ಆಲಗೂರ ಮುಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande